ದೃಶ್ಯ -1 : ನೆರೆ ಹಾವಳಿಗೆ ತುತ್ತಾದ ಯಾವುದೇ ಹಳ್ಳಿ.
ಪ್ರಶ್ನೆ: ನಿಮ್ಮ ಮನೆ ಬಿದ್ದಿದೆಯಾ?
ಉತ್ತರ: ಹೌದು
ಪ್ರಶ್ನೆ: ಪೂರ್ತಿನಾ, ಇಲ್ಲಾ ಅರ್ಧನೋ?
ಉತ್ತರ: ಪೂರ್ತಿ. ಏನೂ ಉಳಿದಿಲ್ಲ.
ಪ್ರಶ್ನೆ: ಅದು ಪಕ್ಕಾ ಮನೆಯೋ, ಅಥವಾ ಕಚ್ಚಾನೋ?
ಉತ್ತರ: ಹಾಗಂದರೆ...
ಪ್ರಶ್ನೆ ಕೇಳಿದ ಅಧಿಕಾರಿ: ಹೋಗಲಿ ಬಿಡಿ. ನಿಮ್ಮದು ಕಚ್ಚಾ ಮನೆ. ರೂ 10,000 ಕೊಡ್ತೀವಿ. ಕಾನೂನು ಪ್ರಕಾರ ನಿಮಗೆ ಸಿಗೋದೇ ಅಷ್ಟು. ಮನೆ ಕಟ್ಕೊಂಡು ಹಾಯಾಗಿರಿ.
ಉತ್ತರ ಕೊಟ್ಟ ಬಡವ: ಮನೆಯಲ್ಲಿದ್ದ ಎಲ್ಲವೂ ನಿಚ್ಚಳವಾಗಿದೆ. ಎರಡು ಮೂಟೆ ಬತ್ತ, ಒಂದು ಚೀಲ ಜೋಳ ಇತ್ತು. ದೇವರ ಫೋಟೋ ಮುಂದಿನ ಡಬ್ಬಿಯಲ್ಲಿ ಎಲ್ಲಾ ಸೇರಿ ಎರಡು ಸಾವಿರ ದುಡ್ಡು ಕೂಡಿಟ್ಟಿದ್ದೆ... ಅದಕ್ಕೆ ಏನೂ ಪರಿಹಾರ ಸಿಗೋಲ್ವ?
ಅಧಿಕಾರಿ: ಅದಕ್ಕೆಲ್ಲಾ ಯಾರು ಪರಿಹಾರ ಕೊಡ್ತಾನೆ? ಸಿಕ್ಕಿದಷ್ಟು ಇಟ್ಟುಕೋ... ಇಲ್ಲಾಂದ್ರೆ ಅದೂ ಸಿಗೋಲ್ಲ.
ಬಡವ: ಹಾಗೆ ಮಾಡಬೇಡಿ. ಅಷ್ಟೇ ಕೊಡಿ. ಹೇಗೋ ಬದುಕೋತೀನಿ..
---
ದೃಶ್ಯ-2 : ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಭೆ. ಕಾನ್ಫರೆನ್ಸ್ ಹಾಲ್, ಮೂರನೇ ಮಹಡಿ, ವಿಧಾನಸೌಧ.
ಶಿಕ್ಷಣೋದ್ಯಮಿ 1 - ನಮ್ಮ ಸಂಸ್ಥೆಯಿಂದ 5,000 ಮನೆ ಕಟ್ತೇವೆ. ಶಾಲೆಗಳನ್ನು ದತ್ತು ತಗೋತೇವೆ.
ಶಿಕ್ಷಣೋದ್ಯಮಿ 2 - ನಮ್ಮ ಕಾಲೇಜಿನ ನೌಕರರಿಂದ, ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ್ದೇವೆ. ಇಗೋ ಚೆಕ್..
(ಚೆಕ್ ಸಿಎಂಗೆ ಹಸ್ತಾಂತರವಾಗುತ್ತೆ. ಹತ್ತಾರು ಕೆಮರಾಗಳಿಂದ ಎಲ್ಲೆಲ್ಲೂ ಮಿಂಚು.)
ಮುಖ್ಯಮಂತ್ರಿ: ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಅಪಾರ ಹಾನಿಯಾಗಿದೆ. ನಿಮ್ಮೆಲ್ಲರ ಸಹಕಾರ ಬೇಕು. ಉದಾರವಾಗಿ ದಾನ ಮಾಡಿ. ನಿಮಗೆ ಭರವಸೆ ಕೊಡ್ತೇನೆ - ನಿಮ್ಮ ಶಿಕ್ಷಣ ಸಂಸ್ಥೆಗಳಿಗೆ ನಮ್ಮ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ.
* ನೆರೆ ಪೀಡಿತ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಉಚಿತ ಜಮೀನು.
* ಒಂದು ಮೆಡಿಕಲ್ ಕಾಲೇಜಿಗೆ 10 ಎಕರೆ ಜಮೀನು ಉಚಿತ
* ಒಂದು ಇಂಜಿನಿಯರಿಂಗ್ ಕಾಲೇಜಿಗೆ 5 ಎಕರೆ.
* ಒಂದು ಐಟಿಐ/ಪಾಲಿಟೆಕ್ನಿಕ್ ಕಾಲೇಜಿಗೆ 2 ಎಕರೆ.
* ನಿಮ್ಮ ಬಹುದಿನದ ಬೇಡಿಕೆಯಂತೆ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ರೈತರಿಂದ ಜಮೀನು ಖರೀದಿಸಲು ಸುಲಭ ಹಾದಿ ಮಾಡಿಕೊಡುತ್ತೇವೆ. ನಿಮಗೆ ನಮ್ಮ ಸಹಕಾರ ಇದೆ.
(ಜೋರು ಚಪ್ಪಾಳೆ. ಮುಖ್ಯಮಂತ್ರಿಗೆ ಅಭಿನಂದನೆ.)
---
ಅಂದಹಾಗೆ, ಇಲ್ಲಿ ಪರಿಹಾರ ಸಿಕ್ಕಿದ್ದು ಯಾರಿಗೆ? ಮನೆ, ಬೆಳೆ ಕಳೆದುಕೊಂಡ ಬಡವರಿಗೋ? ಅಥವಾ ಹತ್ತಾರು ವರ್ಷಗಳಿಂದ ಶಿಕ್ಷಣ ದಂಧೆ ನಡೆಸಿ ಹಣ ಕೊಳ್ಳೆ ಹೊಡೆದ ಶ್ರೀಮಂತರಿಗೋ? ಇದುವರೆವಿಗೂ ಒಂದು ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜು ಮಾಡಿ ಯಾವುದೇ ವ್ಯಕ್ತಿ, ಸಂಸ್ಥೆ ನಷ್ಟ ಅನುಭವಿಸಿದ ಉದಾಹರಣೆ ಇದೆಯೆ? ಆದರೂ ಸರಕಾರ ಮತ್ತೆ ಮತ್ತೆ ಅವರಿಗೇ ನೆರವು ಘೋಷಿಸುತ್ತೆ.
ನೆರೆ ಬಂದ ಕಾರಣ ಶಿಕ್ಷಣ ಸಂಸ್ಥೆಗಳ ಬಹುಕಾಲದ ಬೇಡಿಕೆ (ಭೂ ಸುಧಾರಣೆ ಕಾಯಿದೆ ತಿದ್ದುಪಡಿ) ಇಡೇರುವ ಲಕ್ಷಣಗಳಿವೆ. ಅವರಿಗೆ ಇದು ಹಬ್ಬದ ಸಂಭ್ರಮ ತಂದರೂ ಅಚ್ಚರಿಯಿಲ್ಲ.
ಹೌದು. ಎವರಿಬಡಿ ಲವ್ಸ್ ಎ ಗುಡ್ ಫ್ಲಡ್ ಟೂ...!