ಅದು ಸಿರುಗುಪ್ಪದಿಂದ ಹಚ್ಚೊಳ್ಳಿಗೆ ಹೋಗುವ ಹಾದಿ. ನೆರೆ ಇಳಿದ ಇನ್ನು ಕೆಲವೇ ಗಂಟೆಗಳಷ್ಟೆ. ಬಿಬಿಎಂಪಿ ಕಳುಹಿಸಿದ್ದ ಆಹಾರ ಪೊಟ್ಟಣಗಳನ್ನು ಹೊತ್ತ ಲಾರಿಯೊಂದು ಆಗ ತಾನೆ ಹಚ್ಚೊಳ್ಳಿಯಿಂದ ಸಿರುಗುಪ್ಪಕ್ಕೆ ಹಿಂತಿರುಗುತ್ತಿತ್ತು. ಪ್ರತಿ ಆಹಾರ ಪೊಟ್ಟಣದಲ್ಲಿ ಒಂದು ಬಿಸ್ಕತ್ ಪ್ಯಾಕ್, ಎರಡು ಬ್ರೆಡ್ ಪ್ಯಾಕ್ಸ್, 100 ಗ್ರಾಂ ಗ್ಲುಕೋಸ್ ಮತ್ತು 500 ಮಿಲೀ ನೀರು. ಇಂತಹ 50 ಅಥವಾ 100ರ ಪೊಟ್ಟಣಗಳನ್ನು ಒಂದು ಚೀಲದಲ್ಲಿ ತುಂಬಿ ಹಳ್ಳಿಹಳ್ಳಿಗೆ ರಸ್ತೆ ಮುಊಲಕ ತಲುಪಿಸುವ ಕೆಲಸಕ್ಕೆ ಬಳ್ಳಾರಿ ಜಿಲ್ಲಾ ಆಡಳಿತ ಮುಂದಾಗಿತ್ತು.
ಹಿಂದಿನ ದಿನವಷ್ಟೆ ಸರಕಾರ ಹೆಲಿಕಾಪ್ಟರ್ ಮುಊಲಕ ಈ ಪೊಟ್ಟಣಗಳನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡಿತ್ತು. ಆದರೆ ಎಲ್ಲಲ್ಲೂ ನೀರೇ ಇದ್ದ ಕಾರಣ ಆಕಾಶದಿಂದ ಹಾರಿ ಬಂದ ಪೊಟ್ಟಣಗಳು ಜನರಿಗೆ ತಲುಪಿದ್ದು ತೀರಾ ಕಡಿಮೆ. ಬಾಗೇವಾಡಿಯ ಗ್ರಾಮಸ್ತನ ಮಾತಿನಲ್ಲೇ ಹೇಳುವುದಾದರೆ.. "ಹೆಲಿಕಾಪ್ಟರ್ ನಿಂದ ಎಸೆದ ಎಷ್ಟೋ ಪೊಟ್ಟಣಗಳು ಅದು ನೀರಲ್ಲಿ ಬಿದ್ದವು. ಬ್ರೆಡ್, ಬಿಸ್ಕತ್, ಕೊಚ್ಚೆ ಮೇಲೆ ಬಿದ್ರೆ ಅದನ್ನು ಕತ್ತೆಯುಊ ಮುಟ್ಟಲ್ಲ".
ಆಕಾಶದಿಂದ ಎಸೆದ ಪೊಟ್ಟಣಗಳನ್ನು ಯಶಸ್ವಿಯಾಗಿ ಕ್ಯಾಚ್ ಹಿಡಿದವರಿಗೆ ಮಾತ್ರ ಆಹಾರ ಸಿಕ್ಕಿತ್ತು. ಇತರರದು ಸತತ 48 ಗಂಟೆಗಳ ಉಪವಾಸ. ಸುತ್ತಲೂ ನೀರಿದೆ, ಆದರೆ ನೀರಡಿಕೆ ನೀಗಿಸಲು ಒಂದು ಗುಟುಕೂ ನೀರಿಲ್ಲ. ವಿಶಿಷ್ಟ ಅಂದರೆ ಹಳ್ಳದ ಬುಡದಲ್ಲಿಯೇ ಇರುವ ಇಲ್ಲಿಯ ಗ್ರಾಮಗಳಲ್ಲಿ ಭತ್ತ ಬೆಳೆಗಾರರೇ ಹೆಚ್ಚು. ಭತ್ತ ಬೆಳೆಯುವವರೆಂದರೆ ತಕ್ಕಮಟ್ಟಿಗೆ ಸ್ಥಿತಿವಂತರೆ. ಬಾಗೇವಾಡಿ, ಕುಡುದರ ಹಾಳು, ಹಚ್ಚೊಳ್ಳಿ, ಶ್ರೀಧರಗಡ್ಡೆ ಹಳ್ಳಿಗಳಲ್ಲಿ ಮನೆಗೊಂದು ಕನಿಷ್ಟ ಒಂದು ಹಿರೋ ಹೊಂಡಾ ಇದ್ದೇ ಇತ್ತು. ಆದರೆ ಅವರನ್ನು ಪ್ರವಾಹ ಏಕ್ ದಂ ಉಪವಾಸಕ್ಕೆ ದೂಡಿತ್ತು.
ಕುಡುದರ ಹಾಳು ಎಂಬ ಹಳ್ಳಿಯ ಹೆಸರೇ ವಿಶಿಷ್ಟ. ಹೆಂಡ ಕುಡಿದರೆ ಹಾಳು ಎಂಬ ಸಂದೇಶ ಅದು ಸಾರುತ್ತಿದೆಯೋ, ಅಥವಾ ಅದು ಕಾಲಾಂತರದಲ್ಲಿ ಬೇರೆ ಬೇರೆ ರೂಪ ತಾಳಿ ಇಂದು ಈ ಹೆಸರು ಉಳಿದಿದೆಯೋ ಸ್ಪಷ್ಟವಿಲ್ಲ. ಆದರೆ ನೆರೆಯಂತೂ ಊರಿನ ಜನರ ಬಾಳನ್ನು ಕೆಲದಿನಗಳ ಮಟ್ಟಿಗೆ ಹಾಳು ಮಾಡಿದ್ದಂತೂ ಸುಳ್ಳಲ್ಲ. ಆ ಊರು ಅಕ್ಷರಶಃ ದ್ವೀಪವಾಗಿತ್ತು. ಸಿರುಗುಪ್ಪ ಕಡೆಗೆ ಸಾಗುವ ದಾರಿ ಮಧ್ಯೆ ಇದ್ದ ಸೇತುವೆ ಕುಸಿದ ಕಾರಣ ಆ ಊರಿಗೆ ಹಾಗೂ ಆ ಊರಿನ ಆಚೆಗಿರುವ ಹಚ್ಚೊಳ್ಳಿ, ಮಾಟೂರು ಹಳ್ಳಿಗಳಿಗೆ ಪರಿಹಾರ ಸಾಮಾಗ್ರಿ ತಲುಪಿಸುವುದು ಸರಕಾರಕ್ಕೆ ಕಷ್ಟವಾಗಿತ್ತು.
ಹಚ್ಚೊಳ್ಳಿಯಿಂದ ಹಿಂತಿರುಗುತ್ತಿದ್ದ ಆಹಾರ ಪೊಟ್ಟಣ ಹೊತ್ತ ಲಾರಿ ಹಿಂದೆ ಜನವೋ ಜನ. ಹೆಂಗಸರು, ಮಕ್ಕಳು ಲಾರಿಯ ಹಿಂದೆ ಕೈಚಾಚಿ ಓಡುತ್ತಿದ್ದಾರೆ. ಚಾಲಕ ಗಾಡಿಯನ್ನು ನಿಲ್ಲಿಸುವ ಮನಸ್ಸು ಮಾಡಲಿಲ್ಲ. ಹಿಂಬದಿಯಲ್ಲಿದ್ದ ವ್ಯಕ್ತಿ ಒಂದು ಚೀಲವನ್ನು ಎಸೆದ. ಅದು ನೆಲಕ್ಕೆ ಬಿತ್ತು. ಒಬ್ಬ ಮಧ್ಯ ವಯಸ್ಸಿನ ಹೆಂಗಸು ಅದನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದಳು. ಆ ಕ್ಷಣ ಆಕೆಯ ಮುಖದಲ್ಲಿ ಏನೋ ಸಾಧಿಸಿದ ಭಾವ.
ಲಾರಿಯವ ಮತ್ತೆ ಪೊಟ್ಟಣ ಎಸೆಯದೆ ಮುಂದೆ ಸಾಗಿದ. ಎಲ್ಲರೂ ಆಹಾರ ಪೊಟ್ಟಣಗಳಿಗಾಗಿ ಆ ಹೆಂಗಸಿಗೆ ಮುಗಿ ಬಿದ್ದರು. ಆಕೆ ಅನಾಮತ್ತಾಗಿ 25-30 ಪೊಟ್ಟಣಗಳಿರುವ ಚೀಲವನ್ನು ಹೆಗಲ ಮೇಲೆ ಹೊತ್ತು ತನ್ನ ಗುಸಿಸಲಿಗೆ ನಡೆದಳು. "ಯಾರಿಗೂ ಕೊಡಲ್ಲ. ಇದು ನನಗೆ ಸಿಕ್ಕಿರೋದು.. ನಿಮಗ್ಯಾಕೆ ಕೊಡಲಿ.." ಹೆಂಗಸಿನ ವರಸೆ.
ಸರಕಾರ ಒಂದು ದಿನ ಆಕಾಶದಿಂದ ಆಹಾರ ಪೊಟ್ಟಣ ಎಸೆದು ಕ್ಯಾಚ್ ಹಿಡೀರಿ ನೋಡೋಣ ಅನ್ನೋ ಚಾಲೆಂಜನ್ನು ಸಂತ್ರಸ್ತರಿಗೆ ಒಡ್ಡುತ್ತೆ. ಮಾರನೇ ದಿನ ತಾಕತ್ತಿದ್ದರೆ ನಮ್ಮ ಲಾರಿ ಹಿಂದೆ ಓಡಿ ಬಂದು ಕ್ಯಾಚ್ ಹಿಡೀರಿ ನೋಡೋಣ ಅನ್ನುತ್ತೆ. ಹಸಿದ ಹೊಟ್ಟೆಗಳೊಂದಿಗೆ ಆಟ ಆಡೋದು ಅಂದ್ರೆ ಇದೇ ತಾನೆ..?
ಭಾನುವಾರ, ನವೆಂಬರ್ 15, 2009
ಬುಧವಾರ, ನವೆಂಬರ್ 11, 2009
ಸುಮ್ಮನೆ ಹೊರಟು ಬಿಡಿ, ಹೇಳ ಬೇಡಿ ಕಾರಣ

"ನಾಡಿನ ಅರಣ್ಯ ಸಂಪತ್ತು ಹಿಡಿಯಷ್ಟು ಜನರ ಲಾಭಕ್ಕಾಗಿ ದುರುಪಯೋಗವಾಗುತ್ತಿದೆ, ಆದರೂ ನಾವು ಏನೂ ಮಾಡಲಾರದ ಸ್ಥಿತಿಯಲ್ಲಿದ್ದೇವೆ..." - ಹತ್ತಿರಹತ್ತಿರ ಆರು ಕೋಟಿ ಜನರನ್ನು ಪ್ರತಿನಿಧಿಸುವ, ಈ ರಾಜ್ಯದ ಅತ್ಯುನ್ನತ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ಹೀಗೆ ಅಸಹಾಯಕನಾದರೆ, ಈ ನಾಡನ್ನು ಕಳ್ಳರಿಂದ, ದರೋಡೆ ಕೋರರಿಂದ ರಕ್ಷಿಸುವವರಾರು?
ಮುಖ್ಯಮಂತ್ರಿ ನೇತೃತ್ವದಲ್ಲಿ ಈ ರಾಜ್ಯದ ಕಾರ್ಯಾಂಗ ಕೆಲಸ ನಿರ್ವಹಿಸುತ್ತದೆ. ಮುಖ್ಯಮಂತ್ರಿಯೆ ಕೈ ಚೆಲ್ಲಿ ಕೂತರೆ, ಅವರ ಹಿಂದಿರುವ ಅಧಿಕಾರಿಗಳ ಕತೆಯೇನು? ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಯಡಿಯುಊರಪ್ಪ ನಾಡಿಗೆ ನೀಡುತ್ತಿರುವ ಸಂದೇಶ ಏನು? ಹತ್ತು ದಿನಗಳ ಹಿಂದೆ ಮುಖ್ಯಮಂತ್ರಿ ಬಳ್ಳಾರಿಯ ಮುಊರು ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಿದ್ದರು. ಈಗ ಆ ಮುಊರೂ ಅಧಿಕಾರಿಗಳು ಬಳ್ಳಾರಿಗೆ ವಾಪಾಸಾಗಿದ್ದಾರೆ.
ಗಣಿ ಉದ್ಯಮಿಗಳು ಕಡಿಮೆ ಹಣ ಹೂಡಿ ಅತಿ ಹೆಚ್ಚು ಲಾಭ ಮಾಡಿದವರು. ಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಅದಿರು ಲಭ್ಯವಿರುವ ಜಾಗವನ್ನು ಇಂತಿಷ್ಟು ಅವಧಿಗೆ ಲೀಸ್ ಗೆಂದು ಪಡೆದು ಅಲ್ಲಿ ಗಣಿಗಾರಿಕೆ ನಡೆಸುತ್ತಾರೆ.
ಲೀಸ್ ಒಪ್ಪಂದದ ಪ್ರಕಾರ ಸರ್ಕಾರಕ್ಕೆ ಒಂದಿಷ್ಟು ಹಣ ಕಟ್ಟುತ್ತಾರೆ. ಉಳಿದಂತೆ ಒಂದು ಟನ್ ಅದಿರುಗೆ ಇಷ್ಟು ಎಂಬಂತೆ ರಾಯಲ್ಟಿ ಕೊಡುತ್ತಾರೆ. ಹೆಚ್ಚಿನ ಲಾಭಕ್ಕೆ ಬೇರೆ ದೇಶಕ್ಕೆ ಅದಿರನ್ನು ಮಾರುತ್ತಾರೆ. ಒಂದು ಟನ್ ಅದಿರನ ಮೇಲೆ, ಖರ್ಚೆಲ್ಲಾ ಕಳೆದು 3-4 ಸಾವಿರ ರೂಗಳ ಲಾಭ ಇರುವಾಗ, ಹತ್ತಿರ ಹತ್ತಿರ ನೂರು ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವವರು ರಾತ್ರೋರಾತ್ರಿ ಕೋಟ್ಯಾಧೀಶರಾಗುವುದು ಕಷ್ಟದ ಮಾತೇನಲ್ಲ. ಒಂದು ವರದಿಯ ಪ್ರಕಾರ ಬಳ್ಳಾರಿ ರೆಡ್ಡಿಗಳಿಗೆ ಆಪ್ತನಾಗಿದ್ದ ಅರಣ್ಯ ಅಧಿಕಾರಿ ಹಲವು ತಿಂಗಳುಗಳಿಂದ ಅದಿರು ಸಾಗಿಸುವ ಲಾರಿಗಳಿಂದ ಅರಣ್ಯ ಪ್ರದೇಶ ಅಭಿವೃದ್ಧಿ ಸುಂಕವನ್ನು ಸಂಗ್ರಹಿಸುವ ಕೆಲಸವನ್ನೇ ಕೈ ಬಿಟ್ಟುಬಿಟ್ಟಿದ್ದರು. ಈಗ್ಗೆ ಹತ್ತು ದಿನಗಳ ಹಿಂದೆ ಹೊಸದಾಗಿ ನೇಮಕಗೊಂಡ ಅಧಿಕಾರ ಒಂದೇ ವಾರದಲ್ಲಿ (ಅಂದರೆ ಹಳೆಯ ಅಧಿಕಾರಿ ಮರಳಿ ಬರುವವರೆಗೆ) ಏನಿಲ್ಲಾ ಅಂದರೂ 15 ಕೋಟಿ ರೂಗಳಷ್ಟು ಹಣವನ್ನು ಸುಂಕವಾಗಿ ಸಂಗ್ರಹಿಸಿದ್ದರು. ಈ ವರದಿಯು ನಿಜವೇ ಆಗಿದ್ದಲ್ಲಿ, ಸರಕಾರದ ಬೊಕ್ಕಸ ಇದುವರೆಗೂ ಇಂತಹ ಗಣಿ ಕಳ್ಳರಿಂದ ಕಳೆದುಕೊಂಡದ್ದೆಷ್ಟು?
ಪಕ್ಕದ ಆಂಧ್ರ ಪ್ರದೇಶದ ಅಧಿಕಾರಿ ಹೇಳುವಂತೆ ಜನಾರ್ದನ ರೆಡ್ಡಿ ಸಹೋದರರ ಒಡೆತನದಲ್ಲಿರುವ ಗಣಿ ಕಂಪನಿ, ಕರ್ನಾಟಕ ಗಡಿ ಒತ್ತುವರಿ ಮಾಡಿದೆ. ಗಡಿಯನ್ನು ಗುರುತಿಸುವ ಕಲ್ಲುಗಳನ್ನು ನಾಶ ಮಾಡಿ ಹೊಸ ಗಡಿ ಸೃಷ್ಟಿಸಿದೆ. ಅರಣ್ಯ ಇಲಾಖೆ ಅನುಮತಿ ಇಲ್ಲದೆ ಅನಧಿಕೃತವಾಗಿ ಗಣಿಗಾರಿಕೆ ನಡೆಸಿ ಸಾವಿರಾರು ಕೋಟಿ ಲೂಟಿ ಮಾಡಿದೆ. ಆದರೂ ಸರಕಾರ ಏನನ್ನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಸ್ವತಃ ಮುಖ್ಯಮಂತ್ರಿಯೇ ಹಾಗೆ ಒಪ್ಪಿಕೊಂಡಿದ್ದಾರೆ!! ದೇಶದ ಗಡಿ ಕಾಯುವ ಯೋಧ "ಇನ್ನು ನನ್ನ ಕೈಯಲ್ಲಿ ಸಾಧ್ಯವಿಲ್ಲ" ಎಂದು ಕೂತಂತೆ.
ಯಡಿಯುಊರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಹೇಳಿದ ಮಾತುಗಳನ್ನು ಅವರಿಗೆ ಈಗ ನೆನಪಿಸುವ ಅಗತ್ಯವಿದೆ. ರಾಜ್ಯ, ರಾಜ್ಯದ ಗಡಿ, ಸಂಪತ್ತು, ಭಾಷೆ, ಜನ, ಸಂಸ್ಕೃತಿ ಎಲ್ಲವನ್ನೂ ರಕ್ಷಿಸುವ ಹೊಣೆ ನಿಮ್ಮದು. ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿರುವುದು ಆ ಕಾರಣಕ್ಕೆ. ಅದನ್ನೆಲ್ಲಾ ಮರೆತು 'ಏನೂ ಮಾಡಲಾಗದ ಸ್ಥಿತಿ' ಎಂದರೆ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯಲು ನಾಲಾಯಕ್ಕು. ಸುಮ್ಮನೆ ಹೊರಟು ಬಿಡಿ, ಹೇಳ ಬೇಡಿ ಕಾರಣ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)