ಸೋಮವಾರ, ಅಕ್ಟೋಬರ್ 19, 2009

ನೆರೆ ಬಿಡಿಸಿಟ್ಟ ಚಿತ್ರಗಳು

1
ಊರು ಮಾಟೂರು. ಶಿರುಗುಪ್ಪ ತಾಲೂಕಿನ ಕೊನೆ ಹಳ್ಳಿ. ಊರಲ್ಲಿ ಇದ್ದದ್ದು 110 ಮನೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈಗ ಅಲ್ಲಿ ಉಳಿದಿರುವುದೆ ಕೇವಲ ಎರಡು ಮನೆಗಳು. ಮಾಟೂರು ಈಗ ಅಕ್ಷರಶಃ ಹಾಳೂರು. ನೆಟ್ಟಗೆ ನಿಂತಿರುವ ಎರಡು ಮನೆಗಳಲ್ಲೂ ಯಾರೂ ಜೀವಿಸುತ್ತಿಲ್ಲ. ಮೆತ್ತಗಾಗಿರುವ ಗೋಡೆ ಅದ್ಯಾವಾಗ ಮುರ್ಕೊಂಡು ಬೀಳುತ್ತೋ ಎಂಬ ಆತಂಕ.

2
ಹೆಸರು ವೆಂಕಟೇಶ. ಈಗ ಮಾನವಿಯಲ್ಲಿ ಐಟಿಐ ಓದುತ್ತಿದ್ದಾನೆ. ಮೊನ್ನೆ ಬಿದ್ದ ಭಾರೀ ಮಳೆಗೆ ಅವನ ಮನೆ ಮುರಿದುಬಿದ್ದಿದೆ. ಮನೆಯಲ್ಲಿದ್ದ ಎಲ್ಲವೂ ನೀರುಪಾಲು. ಅವನ ಎಸ್ ಎಸ್ ಎಲ್ ಸಿ ಅಂಕಪಟ್ಟಿಯೂ. ಅವನಿಗೆ ಈಗ ಅಂಕಪಟ್ಟಿಯನ್ನು ಹೊಂದಿಸುವುದು ದೊಡ್ಡ ಕೆಲಸ. ತಾನು ಓದಿದ ಶಾಲೆಯಲ್ಲಿ ಮೂಲ ದಾಖಲಾತಿ ಪರೀಕ್ಷಿಸಿ, ಪರೀಕ್ಷಾ ಮಂಡಳಿ ವರೆಗೆ ಅವನು ಅಲೆಯಬೇಕು. ದುರಾದೃಷ್ಟವಶಾತ್ ಅವನ ಶಾಲೆಯೂ ಇದೇ ಮಳೆಗೆ ತುತ್ತಾಗಿ, ಅಲ್ಲಿಯ ಎಲ್ಲಾ ದಾಖಲೆಗಳು ನೀರುಪಾಲಾಗಿದ್ದರೆ? ಉತ್ತರ ಅವನಲ್ಲಿಲ್ಲ.

3
"ಬರೋಬ್ಬರಿ ಏಳು ಟ್ರಾಕ್ಟರ್ ಲೋಡ್ ಬರೀ ಸಕ್ಕರೇನೆ ನಾಲ್ಕು ದಿನದ ಹಿಂದೆ ಅನ್ ಲೋಡ್ ಮಾಡಿ ಗೊಡೌನ್ ತುಂಬಿಸಿದ್ವಿ. ಈಗ ನೋಡಿ, ಒಂದೇ ಒಂದು ಬೊಗಸೆ ಸಕ್ಕರೆನೂ ಉಳಿದಿಲ್ಲ. ಅಷ್ಟೇ ಅಲ್ಲ, ರಾಶಿ ರಾಶಿ ದ್ರಾಕ್ಷಿ, ಗೋಡಂಬಿ... ಐದಾರು ಲೋಡು ಅಕ್ಕಿ.. ಎಲ್ಲವೂ ನೀರಾದವು"..ಹೀಗೆ ಅವಲತ್ತುಕೊಳ್ಳುತ್ತಿದ್ದವರು ಮಂತ್ರಾಲಯ ಮಠ ಆವರಣದಲ್ಲಿರುವ ಅನ್ನಪೂರ್ಣ ಪ್ರಸಾದ ನಿಲಯದ ನೌಕರ.

4
ರಾಯಚೂರು ತಾಲೂಕು ಬುರ್ದಿಪಾಡು ಜನ ಶ್ರೀಮಂತ ರೈತರು. ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆದು ರೊಕ್ಕೆ ಗಳಿಸುತ್ತಿದ್ದರು. ಈಗ್ಗೆ ಕೆಲವು ತಿಂಗಳುಗಳಿಂದ ಅಕ್ಕಿ ಬೆಲೆ ಏರುತ್ತಿದ್ದ ಕಾರಣ ಈ ಬಾರಿ ಭಾರೀ ಲಾಭವನ್ನೇ ನಿರೀಕ್ಷಿಸಿದ್ದರು. ಹೊಳೆ ಇನ್ನು ಒಂದೇ ಒಂದು ವಾರ ತಡೆದು ಬಂದಿದ್ದರೆ, ಅವರೆಲ್ಲ ಭತ್ತವನ್ನು ಕಟಾವು ಮಾಡಿ ಕಾಸು ಎಣಿಸುತ್ತಿದ್ದರು. ಆದರೆ ಈಗ ಆದ ನಷ್ಟವೆಷ್ಟು ಎಂದು ಲೆಕ್ಕ ಹಾಕುತ್ತಿದ್ದಾರೆ.
- ಮೊನ್ನೆಯ ನೆರೆ ಬಿಡಿಸಿಟ್ಟ ಕೆಲವು ದೃಶ್ಯಗಳಿವು.