ಭಾನುವಾರ, ಡಿಸೆಂಬರ್ 13, 2009

ಪತ್ರಕರ್ತರಿಗಿದು ಸುವರ್ಣ ಸಮಯ!!

ನಿನ್ನೆ ಕನ್ನಡ ಪ್ರಭ ಮಿತ್ರ ಮಂಜುವಿನಿಂದ 'ನನ್ನ ಮೊಬೈಲ್ ದೂರವಾಣಿ ಸಂಖ್ಯೆ ಬದಲಾಗಿದೆ. ಹೊಸ ನಂಬರ್ ನೋಟ್ ಮಾಡಿಕೊಳ್ಳಿ' ಎಂಬರ್ಥದ ಮೆಸೆಜು ಬಂತು. ತಕ್ಷಣ ನನ್ನ ಪ್ರಶ್ನೆ 'ಬದಲಾಗಿರುವುದು ಕೇವಲ್ ನಂಬರ್ರೋ, ಅಥವಾ ಕಚೇರಿ ಕೂಡಾ?'. ಉತ್ತರ ಅತ್ತಕಡೆ ಸಿದ್ಧವಿತ್ತು.
ನಿಜ. ಇತ್ತೀಚೆಗೆ ಅನೇಕ ಪತ್ರಕರ್ತರು ತಮ್ಮ ದೂರವಾಣಿ ಸಂಖ್ಯೆಗಳನ್ನು ಬದಲಿಸುತ್ತಿದ್ದಾರೆ. ಅರ್ಥಾತ್ ತಮ್ಮ ಕಚೇರಿಗಳನ್ನೂ. ಕೆಲವರು ಕ್ವೀನ್ಸ್ ರೋಡ್ ಗೆ ಬೈ ಹೇಳಿ, ಇನ್ಫೆಂಟ್ರಿ ರಸ್ತೆಗೆ ಸೇರಿಕೊಂಡಿದ್ದಾರೆ. ಅಲ್ಲೊಂದಿಷ್ಟು ಮಂದಿ ಇನ್ಫೆಂಟ್ರಿ ರಸ್ತೆಯಲ್ಲಿ ಬದಲಾದ ಹವಾಮಾನಕ್ಕೆ ಒಗ್ಗಿಕೊಳ್ಳದೆ ಸದಾಶಿವನಗರದತ್ತ ಮುಖ ಮಾಡಿದ್ದಾರೆ. ಹಾಗೆ ಮಣಿಪಾಲ ಟವರ್ಸ್ ನಲ್ಲಿದ್ದ ಒಂದಿಬ್ಬರು ಎಕ್ಸ್ ಪ್ರೆಸ್ ಬಿಲ್ಡಿಂಗ್ ಗೆ ಶಿಫ್ಟ್ ಆಗಿದ್ದಾರೆ.
ತೀರಾ ಸರಳವಾಗಿ ಹೇಳಬೇಕೆಂದರೆ ಇದು ಪತ್ರಕರ್ತರಿಗೆ ಸುವರ್ಣ ಸಮಯ! ಗೋಲ್ಡನ್ ಟೈಮ್ ಅಂತಾರಲ್ಲ ಹಾಗೆ...
ಆರ್ಥಿಕ ದಿಗ್ಬಂಧನದಿಂದ ಪ್ರಪಂಚದ ಜಾಗತಿಕ ಮಾರುಕಟ್ಟೆಗಳು ಚೇತರಿಸಿಕೊಳ್ಳಲು ಇನ್ನೂ ಹೆಣಗಾಡುತ್ತಿರುವಾಗಲೇ, ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಇದು ನಿಜಕ್ಕೂ ಸಂತೋಷದ ಸಂಗತಿ.
ಹೊಸ ಪತ್ರಿಕೆ, ಹೊಸ ಚಾನೆಲ್ ಲಾಂಚ್ ಆಗ್ತಿದೆ ಅನ್ನೋದೇ ಖುಷಿಯ ವಿಚಾರ. ಕಾರಣ ಇಷ್ಟೆ - ಒಂದಿಷ್ಟು ಜನರಿಗೆ ಕೆಲಸ ಸಿಗುತ್ತೆ. ಹೊಸದಾಗಿ ಬಂದಿರುವ ಕಾರಣ ಚಾನೆಲ್ ಅಥವಾ ಪತ್ರಿಕೆ ನೇತೃತ್ವ ಹೊತ್ತವರು ಹೊಸ ಪ್ರಯೋಗಗಳಿಗೆ ತೊಡಗಿಸಿಕೊಳ್ಳುತ್ತಾರೆ. ಆ ಮುಊಲಕ ಒಟ್ಟಾರೆ ಪತ್ರಿಕೋದ್ಯಮ ಹೊಸ ಮಜಲುಗಳಿಗೆ ತೆರೆದುಕೊಳ್ಳುತ್ತದೆ. ಇದರಿಂದ ಸಮಾಜದ ಮೇಲಾಗುವ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳ ಚರ್ಚೆ ಒತ್ತಟ್ಟಿಗಿರಲಿ.
ಹೀಗೆ ಹೊಸ ಹೊಸ ಪತ್ರಿಕೆಗಳು, ಚಾನೆಲ್ ಗಳು ಪತ್ರಿಕೋದ್ಯಮ ಪ್ರವೇಶಿಸುವುದನ್ನು ಆಸೆಗಣ್ಣಿನಿಂದ ಸ್ವಾಗತಿಸುವವರೆಂದರೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಕಲಿಯುತ್ತಿರುವ ವಿದ್ಯಾರ್ಥಿಗಳು. ಹೊಸ ಚಾನೆಲ್ ನಲ್ಲಾದರೂ ನನಗೆ ಇಂಟರ್ನ್ ಶಿಪ್ ಗೆ ಅವಕಾಶ ದೊರಕಬಹುದೇ, ಆ ಮುಊಲಕ ಕೆಲಸಕ್ಕೆ ದಾರಿ ಕಂಡುಕೊಳ್ಳಬಹುದೇ ಎಂದೆಲ್ಲಾ ಅವರು ಯೋಚಿಸುತ್ತಾರೆ. ಅಫ್ ಕೋರ್ಸ್ ಇದು ಕನ್ನಡ ಪತ್ರಿಕೋದ್ಯಮಕ್ಕೆ ಪ್ರವೇಶ ಬಯಸುವವರ ಕತೆ. ಇಂಗ್ಲಿಷ್ ನವರದಲ್ಲ.
ಒಟ್ಟಿನಲ್ಲಿ ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಸಂಚಲನವಿದೆ. ಖುಷಿ ಪಡೋಣ.