ಭಾನುವಾರ, ಅಕ್ಟೋಬರ್ 25, 2009

ಸಮಾಜವಾದಿಗಳೆಲ್ಲ ಒಂದಡೆ ಸೇರಿದ್ದರು...

ಹಿರಿಯ ಸಮಾಜವಾದಿಗಳೆಲ್ಲ ಭಾನುವಾರ ಬೆಂಗಳೂರಿನಲ್ಲಿ ಒಂದೆಡೆ ಸೇರಿದ್ದರು. ಭಾರತದ ಸಮಾಜವಾದಿ ಚಳವಳಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಿಂದ ಅನೇಕ ಸಮಾಜವಾದಿ ಹೋರಾಟಗಾರರು ಭಾಗವಹಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದರೂ ಅನಂತಮುಊರ್ತಿ ಹಾಜರಿದ್ದರು.
ಅವರಲ್ಲಿ ಮಾತನಾಡಿದ ಅನೇಕರಿಗೆ ಇನ್ನೂ ಬತ್ತದ ಉತ್ಸಾಹ. ಸಮಾಜವಾದ ಹೋರಾಟ ವಿಫಲವಾಗಿಲ್ಲ, ಅದು ಎಂದಿಗೂ ಸಾಯುವುದಿಲ್ಲ ಎಂಬುದರ ಬಗ್ಗೆ ಅವರಿಗೆ ದೃಢ ನಂಬಿಕೆ. ವಿಶೇಷ ಅಂದರೆ, ಅವರಲ್ಲಿ ಅನೇಕರು ಸಮಾಜವಾದ ಅಂದ್ರೇನು, ಅದರ ಹೋರಾಟದ ಸ್ವರೂಪಗಳೇನು ಎಂದು ಪುಸ್ತಕ ಓದಿ ಹೋರಾಟಕ್ಕೆ ಇಳಿದವರಲ್ಲ. ಕಾರವಾರದ ವಿಷ್ಣು ನಾಯ್ಕ್ ತಮ್ಮ ಮಾತುಗಳಲ್ಲಿ ಹೇಳಿದರು. ಅವರು ಎಂಟನೇ ಇಯತ್ತೆ ಓದುವಾಗ ಲಾಲ್ ಝಂಡಾ ಹಿಡಿದು ಬೀದಿಗಿಳಿದವರು. ಅವರ ಬದುಕು ಅವರನ್ನು ಹೋರಾಟಕ್ಕೆ ದೂಡಿತ್ತು.
ಮಾತನಾಡಿದ ಅನೇಕರಲ್ಲಿ ಪ್ರಸ್ತುತ ವ್ಯವಸ್ಥೆ ಬಗ್ಗೆ ಬೇಸರವಿತ್ತು. ಹೋರಾಟ, ಸಾಮಾಜಿಕ ಕಳಕಳಿ, ಬದ್ಧತೆ ಎಲ್ಲವೂ ಮುಊಲೆಗುಂಪಾಗಿ ಕೇವಲ ಹಣ ಚುನಾವಣೆಯಲ್ಲಿ ಆಯ್ಕೆಗೊಳ್ಳಲು ಮಾನದಂಡವಾಗಿರುವುದು ವ್ಯವಸ್ಥೆಯ ಬಹುದೊಡ್ಡ ಲೋಪ. ಅದೊಂದು ಕಾಲವಿತ್ತು. ಶಾಂತವೇರಿ ಗೋಪಾಲಗೌಡ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ, ಎಸ್.ಕೆ ಕಾಂತ ಚುನಾವಣೆಗೆ ನಿಂತರೆ ಠೇವಣಿ ಹಣಕ್ಕಾಗಿ ಸ್ನೇಹಿತರ ಎದುರು ಕೈ ಚಾಚಬೇಕಿತ್ತು. ಲಿಂಗಪ್ಪ ಪ್ರಜಾವಾಣಿಗೆ (ಸಾಪ್ತಾಹಿಕ ಪುರವಣಿ, ಅಕ್ಟೋಬರ್ 25) ಬರೆದ ಲೇಖನದಲ್ಲಿ ಹೇಳ್ತಾರೆ, ಅವರು ಚುನಾವಣೆಗೆ ಸ್ಪರ್ಧಿಸಿದಾಗ ತಮ್ಮ ಸ್ನೇಹಿತರ ಜೊತೆ ಸೇರಿ ಚುನಾವಣೆ ವೆಚ್ಚಕ್ಕೆ ಜನರಿಂದ 8,500 ರೂ ಸಂಗ್ರಹಿಸಿದ್ದರಂತೆ. ಚುನಾವಣೆಯಲ್ಲಿ ಗೆದ್ದರು. ಆದರೂ 3,500 ರೂ ಇನ್ನೂ ಖರ್ಚಾಗದೆ ಉಳಿದಿದ್ದಂತೆ! ಅದನ್ನು ಮುಂದೆ ಪಕ್ಷದ ಇತರೆ ಚಟುವಟಿಕೆಗಳಿಗೆ ಬಳಸಿಕೊಂಡರಂತೆ.
ಒಂದು ಕ್ಷಣ ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ನಮ್ಮ ರಾಜಕೀಯ ಪಕ್ಷಗಳು ಖರ್ಚು ಮಾಡಿದ ಹಣ, ಹೆಂಡ.. ಎಲ್ಲವನ್ನೂ ನೆನಪು ಮಾಡಿಕೊಳ್ಳಿ! ಆ ದಿನಗಳಿಗೆ ನಾವು ಹೋಗಲು ಸಾಧ್ಯವೇ?
ಹಿರಿಯ ಹೋರಾಟಗಾರ ಮೈಕೇಲ್ ಫರ್ನಾಂಡಿಸ್ ಮಾತನಾಡಿ ಅಂಬಾನಿಯಂತಹ ಶ್ರೀಮಂತರೇ ಮತ್ತಷ್ಟು ಶ್ರೀಮಂತರಾಗಲು ನಾವೇಕೆ ಕಷ್ಟಪಟ್ಟು ದುಡಿಯಬೇಕು? ಸಮಾಜವಾದಿ ತತ್ವದ ನೆಲೆಯಲ್ಲಿ ಕಂಪನಿಗಳು ಹುಟ್ಟಿಕೊಳ್ಳಬೇಕಿದೆ. ಉದಾಹರಣೆಗೆ ಟೂತ್ ಬ್ರಶ್ - ಭಾರೀ ಬೇಡಿಕೆ ಇರುವ ಸಾಮಾಗ್ರಿ. ಕಡಿಮೆ ವೆಚ್ಚದಲ್ಲಿ ಒಂದು ಕಂಪನಿ ಸ್ಥಾಪನೆ ಮಾಡಿ, ಅದರ ಉತ್ಪನ್ನವನ್ನು ಒಂದು ಸಮಾಜವಾದಿ ಉತ್ಪನ್ನವಾಗಿ ಸ್ವೀಕರಿಸುವುದಾದರೆ ಬಂಡವಾಳಶಾಹಿಗಳಿಗೆ ಪಾಠ ಕಲಿಸಬಹುದು.
ಮೈಸೂರಿನ ಪ. ಮಲ್ಲೇಶ್ ಮಾತನಾಡುತ್ತ ಜನಸಂಘದ ಜತೆ ಕೈ ಜೋಡಿಸಿದ್ದು ಸಮಾಜವಾದ ಹೋರಾಟದ ಬಹುದೊಡ್ಡ ಅಪರಾಧ ಎಂದು ದೂರಿದರು. ಆ ಅಪರಾಧದ ಫಲ ಇಂದು ಕರ್ನಾಟಕದ ಜನ ಅನುಭವಿಸುತ್ತಿದ್ದಾರೆ ಎಂಬುದು ಅವರ ಮಾತಿನ ಧಾಟಿ.
ಆ ಸಭೆಯಲ್ಲಿ ಅನೇಕರು ಗಮನಿಸಿದ ಒಂದು ಅಂಶವೆಂದರೆ - ಯುವಕರು ಕಡಿಮೆ ಸಂಖ್ಯೆಯಲ್ಲಿದ್ದದ್ದು. ನಿಜ ಇಂದಿನ ಯುವಕರಿಗೆ ರಾಜಕೀಯ, ರಾಜಕೀಯ ಸಿದ್ಧಾಂತಗಳೆಡೆಗೆ ಅಷ್ಟಾಗಿ ಆಸಕ್ತಿ ಇಲ್ಲ.

ಗುರುವಾರ, ಅಕ್ಟೋಬರ್ 22, 2009

ಎವರಿಬಡಿ ಲವ್ಸ್ ಎ ಗುಡ್ ಫ್ಲಡ್..

ದೃಶ್ಯ -1 : ನೆರೆ ಹಾವಳಿಗೆ ತುತ್ತಾದ ಯಾವುದೇ ಹಳ್ಳಿ.
ಪ್ರಶ್ನೆ: ನಿಮ್ಮ ಮನೆ ಬಿದ್ದಿದೆಯಾ?
ಉತ್ತರ: ಹೌದು
ಪ್ರಶ್ನೆ: ಪೂರ್ತಿನಾ, ಇಲ್ಲಾ ಅರ್ಧನೋ?
ಉತ್ತರ: ಪೂರ್ತಿ. ಏನೂ ಉಳಿದಿಲ್ಲ.
ಪ್ರಶ್ನೆ: ಅದು ಪಕ್ಕಾ ಮನೆಯೋ, ಅಥವಾ ಕಚ್ಚಾನೋ?
ಉತ್ತರ: ಹಾಗಂದರೆ...
ಪ್ರಶ್ನೆ ಕೇಳಿದ ಅಧಿಕಾರಿ: ಹೋಗಲಿ ಬಿಡಿ. ನಿಮ್ಮದು ಕಚ್ಚಾ ಮನೆ. ರೂ 10,000 ಕೊಡ್ತೀವಿ. ಕಾನೂನು ಪ್ರಕಾರ ನಿಮಗೆ ಸಿಗೋದೇ ಅಷ್ಟು. ಮನೆ ಕಟ್ಕೊಂಡು ಹಾಯಾಗಿರಿ.
ಉತ್ತರ ಕೊಟ್ಟ ಬಡವ: ಮನೆಯಲ್ಲಿದ್ದ ಎಲ್ಲವೂ ನಿಚ್ಚಳವಾಗಿದೆ. ಎರಡು ಮೂಟೆ ಬತ್ತ, ಒಂದು ಚೀಲ ಜೋಳ ಇತ್ತು. ದೇವರ ಫೋಟೋ ಮುಂದಿನ ಡಬ್ಬಿಯಲ್ಲಿ ಎಲ್ಲಾ ಸೇರಿ ಎರಡು ಸಾವಿರ ದುಡ್ಡು ಕೂಡಿಟ್ಟಿದ್ದೆ... ಅದಕ್ಕೆ ಏನೂ ಪರಿಹಾರ ಸಿಗೋಲ್ವ?
ಅಧಿಕಾರಿ: ಅದಕ್ಕೆಲ್ಲಾ ಯಾರು ಪರಿಹಾರ ಕೊಡ್ತಾನೆ? ಸಿಕ್ಕಿದಷ್ಟು ಇಟ್ಟುಕೋ... ಇಲ್ಲಾಂದ್ರೆ ಅದೂ ಸಿಗೋಲ್ಲ.
ಬಡವ: ಹಾಗೆ ಮಾಡಬೇಡಿ. ಅಷ್ಟೇ ಕೊಡಿ. ಹೇಗೋ ಬದುಕೋತೀನಿ..
---

ದೃಶ್ಯ-2 : ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಭೆ. ಕಾನ್ಫರೆನ್ಸ್ ಹಾಲ್, ಮೂರನೇ ಮಹಡಿ, ವಿಧಾನಸೌಧ.

ಶಿಕ್ಷಣೋದ್ಯಮಿ 1 - ನಮ್ಮ ಸಂಸ್ಥೆಯಿಂದ 5,000 ಮನೆ ಕಟ್ತೇವೆ. ಶಾಲೆಗಳನ್ನು ದತ್ತು ತಗೋತೇವೆ.
ಶಿಕ್ಷಣೋದ್ಯಮಿ 2 - ನಮ್ಮ ಕಾಲೇಜಿನ ನೌಕರರಿಂದ, ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ್ದೇವೆ. ಇಗೋ ಚೆಕ್..
(ಚೆಕ್ ಸಿಎಂಗೆ ಹಸ್ತಾಂತರವಾಗುತ್ತೆ. ಹತ್ತಾರು ಕೆಮರಾಗಳಿಂದ ಎಲ್ಲೆಲ್ಲೂ ಮಿಂಚು.)
ಮುಖ್ಯಮಂತ್ರಿ: ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಅಪಾರ ಹಾನಿಯಾಗಿದೆ. ನಿಮ್ಮೆಲ್ಲರ ಸಹಕಾರ ಬೇಕು. ಉದಾರವಾಗಿ ದಾನ ಮಾಡಿ. ನಿಮಗೆ ಭರವಸೆ ಕೊಡ್ತೇನೆ - ನಿಮ್ಮ ಶಿಕ್ಷಣ ಸಂಸ್ಥೆಗಳಿಗೆ ನಮ್ಮ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ.
* ನೆರೆ ಪೀಡಿತ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಉಚಿತ ಜಮೀನು.
* ಒಂದು ಮೆಡಿಕಲ್ ಕಾಲೇಜಿಗೆ 10 ಎಕರೆ ಜಮೀನು ಉಚಿತ
* ಒಂದು ಇಂಜಿನಿಯರಿಂಗ್ ಕಾಲೇಜಿಗೆ 5 ಎಕರೆ.
* ಒಂದು ಐಟಿಐ/ಪಾಲಿಟೆಕ್ನಿಕ್ ಕಾಲೇಜಿಗೆ 2 ಎಕರೆ.
* ನಿಮ್ಮ ಬಹುದಿನದ ಬೇಡಿಕೆಯಂತೆ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ರೈತರಿಂದ ಜಮೀನು ಖರೀದಿಸಲು ಸುಲಭ ಹಾದಿ ಮಾಡಿಕೊಡುತ್ತೇವೆ. ನಿಮಗೆ ನಮ್ಮ ಸಹಕಾರ ಇದೆ.
(ಜೋರು ಚಪ್ಪಾಳೆ. ಮುಖ್ಯಮಂತ್ರಿಗೆ ಅಭಿನಂದನೆ.)
---

ಅಂದಹಾಗೆ, ಇಲ್ಲಿ ಪರಿಹಾರ ಸಿಕ್ಕಿದ್ದು ಯಾರಿಗೆ? ಮನೆ, ಬೆಳೆ ಕಳೆದುಕೊಂಡ ಬಡವರಿಗೋ? ಅಥವಾ ಹತ್ತಾರು ವರ್ಷಗಳಿಂದ ಶಿಕ್ಷಣ ದಂಧೆ ನಡೆಸಿ ಹಣ ಕೊಳ್ಳೆ ಹೊಡೆದ ಶ್ರೀಮಂತರಿಗೋ? ಇದುವರೆವಿಗೂ ಒಂದು ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜು ಮಾಡಿ ಯಾವುದೇ ವ್ಯಕ್ತಿ, ಸಂಸ್ಥೆ ನಷ್ಟ ಅನುಭವಿಸಿದ ಉದಾಹರಣೆ ಇದೆಯೆ? ಆದರೂ ಸರಕಾರ ಮತ್ತೆ ಮತ್ತೆ ಅವರಿಗೇ ನೆರವು ಘೋಷಿಸುತ್ತೆ.
ನೆರೆ ಬಂದ ಕಾರಣ ಶಿಕ್ಷಣ ಸಂಸ್ಥೆಗಳ ಬಹುಕಾಲದ ಬೇಡಿಕೆ (ಭೂ ಸುಧಾರಣೆ ಕಾಯಿದೆ ತಿದ್ದುಪಡಿ) ಇಡೇರುವ ಲಕ್ಷಣಗಳಿವೆ. ಅವರಿಗೆ ಇದು ಹಬ್ಬದ ಸಂಭ್ರಮ ತಂದರೂ ಅಚ್ಚರಿಯಿಲ್ಲ.
ಹೌದು. ಎವರಿಬಡಿ ಲವ್ಸ್ ಎ ಗುಡ್ ಫ್ಲಡ್ ಟೂ...!

ಮಂಗಳವಾರ, ಅಕ್ಟೋಬರ್ 20, 2009

ಕುಂವೀ ಕತೆ ಭಾಗ 2: ಸ್ವಲ್ಪ ಸತ್ಯ, ಅತ್ಯಲ್ಪ ಉಪ್ಪು!

ಕೊಟ್ಟೂರಿನಿಂದ ಮತ್ತಷ್ಟು ಮಸ್ತ್ ಕುಂವೀ ಕತೆಗಳು ರವಾನೆಯಾಗಿವೆ. ನಿಮಗೆ ಹೇಳಲೇಬೇಕು. ಕುಂವೀ 'ಅರಮನೆ' ಸೇರಿದ ಮೇಲೆ 'ಆರೋಹಣ' ಮುಗಿಸಿದ್ದಾರೆ. ಅರಮನೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ತಂದು ಕೊಟ್ಟಿತು. ಅದೇ ರೀತಿ ಆರೋಹಣ ಕುಂವೀಯನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿ.
ಮೊನ್ನೆ ಏನಾತಪ್ಪಾ ಅಂದ್ರೆ...
ಲುಬ್ರಿಕೆಂಟ್ಸ್ ಅಂಗಡಿ ಕವಿ ಸಿದ್ದು ದೇವರಮನಿ ಮತ್ತು ಈಗಷ್ಟೆ ಈ-ಟಿವಿ ಬಿಟ್ಟು ಕಾಲೇಜು ಚಾಕರಿಗೆ ಸೇರಿಕೊಂಡಿರೋ ಸತೀಶ್ ಪಾಟೀಲ ಇಬ್ಬರೂ ಕೂಡಿ 'ಲೇ ಭಾಳ ದಿನ ಆತಲ್ಲೋ ನಮ್ಮ ಕುಂವೀನ ಮಾತಾಡ್ಸಿ. ಹೋಗಿ ಮಾತಾಡ್ಸೋಣ' ಅಂತ ಅವರ ಮನಿ ಕಡಿ ಹೋಗಿದ್ರು. ಕತೆಗಾರರು ಆರಾಮಾಗಿ ಕಾಲು ಚಾಚಿಕೊಂಡು ಟಿವಿಯಲ್ಲಿ ಚಾನೆಲ್ ಮೇಲೆ ಚಾನೆಲ್ ಚೇಂಜ್ ಮಾಡ್ಕೊಂತಾ ಕೂತಿದ್ರು.
ಬರ್ರಿ, ಬರ್ರಿ... ಅಂತ ಮಾತಿಗೆ ಶುರುಹಚ್ಚಿ ಟಿವಿ ಆಫ್ ಮಾಡಿದರು. ಏನ್ರಪ್ಪಾ ಸಮಾಚಾರ ಎನ್ನುತ್ತಲೇ ಒಳಗೆ ಹೋಗಿ ಇತ್ತೀಚೆಗೆ ಬೆಂಗಳೂರಲ್ಲಿ ಬಿಡುಗಡೆಯಾದ ತಮ್ಮ ಕಾದಂಬರಿ 'ಆರೋಹಣ' ಎರಡು ಪ್ರತಿ ತಂದರು. "ಲೇ ಬಲಿ ಬಿದ್ವಿ" ಅಂತ ಮನಸ್ಸಿನಾಗೆ ಇಬ್ಬರೂ ಅಂದುಕೊಂಡು ಕಣ್ಣಲ್ಲೇ ಪರಸ್ಪರ ಸಂತಾಪ ಹಂಚಿಕೊಂಡರು...
"ಬೆಂಗಳೂರಿನಾಗೆ ಫಂಕ್ಷನ್ ಭಾರೀ ಜೋರ್ ಆತ್ರಪ್ಪಾ. ಏನ್ ಜನಾ ಅಂತೀ. ಮತ್ತೆ ಅಂತಿತಾ ಜನ ಅಲ್ಲ. ಎಲ್ಲಾ ಕ್ಲಾಸ್ ಆಡಿಯನ್ಸ್.."- ಹೀಗೆ ಮಾತಿಗೆ ಶುರು ಹಚ್ಚಿದರು. ಅವರ ನಿರೂಪಣೆ ಮುಗಿಯುವ ಹೊತ್ತಿಗೆ ಇಬ್ಬರ ಕೈಗೂ ಕಾದಂಬರಿಯ ಒಂದೊಂದು ಪ್ರತಿ!
"ಪುಸ್ತಕದ ರೇಟು 227 ರೂಪಾಯಿ. ನೀವು ನಮ್ಮೂರಿನವರು. ನಮ್ಮ ಊರಿನ ವಿಐಪಿಗಳು. ನಿಮಗೆ ಈ ಕಾಪಿಗಳು ಫ್ರೀ...(ಈ ಹೊತ್ತಿಗೆ ಸತೀಶ್ ಪಾಟೀಲನ ಮುಖ ಕೊಟ್ಟೂರಿನ ರಥಬೀದಿ ಉದ್ದಕ್ಕೆ ಅರಳಿತ್ತು) ... ಆದರೆ ನೀವೂ ಬರೆಯೋ ಹುಡುಗರು. ಫ್ರೀ ತಗೊಳಲ್ಲ ಅಂತ ಗೊತ್ತು. 27 ರೂಪಾಯಿ ಬಿಟ್ಟು, ಇನ್ನೂರು ರೂಪಾಯಿ ಕೊಡ್ರಿ ಸಾಕು", ಅಂದ್ರು ಕುಂವೀ. ರಥಬೀದಿಯಾಗಿದ್ದ ಸತೀಶ್ ಪಾಟೀಲನ ಮುಖ ಸಿದ್ದು ಅಂಗಡಿಯ ಯಾವುದೋ ಆಯಿಲ್ ಕುಡಿದಂಗೆ ಆಗಿತ್ತು! ವಿಧಿ ಇಲ್ಲ.
ಇಷ್ಟಕ್ಕೆ ನಿಲ್ಲೋಲ್ಲ. ಭಾರೀ ವಿಶೇಷ ಸಮಾಚಾರ ಅಂದ್ರೆ, ಕುಂವೀಗೆ ಮೊನ್ನೆ ಬೆಂಗಳೂರಿನಲ್ಲಿ ಯಾರೋ ಒಂದು ನಾಯಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನಾಯಿಯನ್ನು ಕರೆಯುತ್ತಾ "ಏ ಚಿನ್ನಿ ಇಲ್ಲಿ ಬಾ ಇಲ್ಲಿ. ಯಾರು ಬಂದಾರೆ ನೋಡು. ಇವರಿಬ್ಬರೂ ನಿನ್ನ ಮಾಮಾರು. ಹೈ ಮಾಡು" ಎಂದು ಉಡುಗೊರೆಯಾಗಿ ಬಂದ ನಾಯಿಗೆ ಇವರಿಬ್ಬರನ್ನೂ ಪರಿಚಯಿಸಿದರಂತೆ. ಈ ಹುಡುಗರ ಪೇಚಾಟ ಯಾವ ನಾಯಿಗೂ ಬೇಡ...

ಸೋಮವಾರ, ಅಕ್ಟೋಬರ್ 19, 2009

ನೆರೆ ಬಿಡಿಸಿಟ್ಟ ಚಿತ್ರಗಳು

1
ಊರು ಮಾಟೂರು. ಶಿರುಗುಪ್ಪ ತಾಲೂಕಿನ ಕೊನೆ ಹಳ್ಳಿ. ಊರಲ್ಲಿ ಇದ್ದದ್ದು 110 ಮನೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈಗ ಅಲ್ಲಿ ಉಳಿದಿರುವುದೆ ಕೇವಲ ಎರಡು ಮನೆಗಳು. ಮಾಟೂರು ಈಗ ಅಕ್ಷರಶಃ ಹಾಳೂರು. ನೆಟ್ಟಗೆ ನಿಂತಿರುವ ಎರಡು ಮನೆಗಳಲ್ಲೂ ಯಾರೂ ಜೀವಿಸುತ್ತಿಲ್ಲ. ಮೆತ್ತಗಾಗಿರುವ ಗೋಡೆ ಅದ್ಯಾವಾಗ ಮುರ್ಕೊಂಡು ಬೀಳುತ್ತೋ ಎಂಬ ಆತಂಕ.

2
ಹೆಸರು ವೆಂಕಟೇಶ. ಈಗ ಮಾನವಿಯಲ್ಲಿ ಐಟಿಐ ಓದುತ್ತಿದ್ದಾನೆ. ಮೊನ್ನೆ ಬಿದ್ದ ಭಾರೀ ಮಳೆಗೆ ಅವನ ಮನೆ ಮುರಿದುಬಿದ್ದಿದೆ. ಮನೆಯಲ್ಲಿದ್ದ ಎಲ್ಲವೂ ನೀರುಪಾಲು. ಅವನ ಎಸ್ ಎಸ್ ಎಲ್ ಸಿ ಅಂಕಪಟ್ಟಿಯೂ. ಅವನಿಗೆ ಈಗ ಅಂಕಪಟ್ಟಿಯನ್ನು ಹೊಂದಿಸುವುದು ದೊಡ್ಡ ಕೆಲಸ. ತಾನು ಓದಿದ ಶಾಲೆಯಲ್ಲಿ ಮೂಲ ದಾಖಲಾತಿ ಪರೀಕ್ಷಿಸಿ, ಪರೀಕ್ಷಾ ಮಂಡಳಿ ವರೆಗೆ ಅವನು ಅಲೆಯಬೇಕು. ದುರಾದೃಷ್ಟವಶಾತ್ ಅವನ ಶಾಲೆಯೂ ಇದೇ ಮಳೆಗೆ ತುತ್ತಾಗಿ, ಅಲ್ಲಿಯ ಎಲ್ಲಾ ದಾಖಲೆಗಳು ನೀರುಪಾಲಾಗಿದ್ದರೆ? ಉತ್ತರ ಅವನಲ್ಲಿಲ್ಲ.

3
"ಬರೋಬ್ಬರಿ ಏಳು ಟ್ರಾಕ್ಟರ್ ಲೋಡ್ ಬರೀ ಸಕ್ಕರೇನೆ ನಾಲ್ಕು ದಿನದ ಹಿಂದೆ ಅನ್ ಲೋಡ್ ಮಾಡಿ ಗೊಡೌನ್ ತುಂಬಿಸಿದ್ವಿ. ಈಗ ನೋಡಿ, ಒಂದೇ ಒಂದು ಬೊಗಸೆ ಸಕ್ಕರೆನೂ ಉಳಿದಿಲ್ಲ. ಅಷ್ಟೇ ಅಲ್ಲ, ರಾಶಿ ರಾಶಿ ದ್ರಾಕ್ಷಿ, ಗೋಡಂಬಿ... ಐದಾರು ಲೋಡು ಅಕ್ಕಿ.. ಎಲ್ಲವೂ ನೀರಾದವು"..ಹೀಗೆ ಅವಲತ್ತುಕೊಳ್ಳುತ್ತಿದ್ದವರು ಮಂತ್ರಾಲಯ ಮಠ ಆವರಣದಲ್ಲಿರುವ ಅನ್ನಪೂರ್ಣ ಪ್ರಸಾದ ನಿಲಯದ ನೌಕರ.

4
ರಾಯಚೂರು ತಾಲೂಕು ಬುರ್ದಿಪಾಡು ಜನ ಶ್ರೀಮಂತ ರೈತರು. ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆದು ರೊಕ್ಕೆ ಗಳಿಸುತ್ತಿದ್ದರು. ಈಗ್ಗೆ ಕೆಲವು ತಿಂಗಳುಗಳಿಂದ ಅಕ್ಕಿ ಬೆಲೆ ಏರುತ್ತಿದ್ದ ಕಾರಣ ಈ ಬಾರಿ ಭಾರೀ ಲಾಭವನ್ನೇ ನಿರೀಕ್ಷಿಸಿದ್ದರು. ಹೊಳೆ ಇನ್ನು ಒಂದೇ ಒಂದು ವಾರ ತಡೆದು ಬಂದಿದ್ದರೆ, ಅವರೆಲ್ಲ ಭತ್ತವನ್ನು ಕಟಾವು ಮಾಡಿ ಕಾಸು ಎಣಿಸುತ್ತಿದ್ದರು. ಆದರೆ ಈಗ ಆದ ನಷ್ಟವೆಷ್ಟು ಎಂದು ಲೆಕ್ಕ ಹಾಕುತ್ತಿದ್ದಾರೆ.
- ಮೊನ್ನೆಯ ನೆರೆ ಬಿಡಿಸಿಟ್ಟ ಕೆಲವು ದೃಶ್ಯಗಳಿವು.

ಭಾನುವಾರ, ಅಕ್ಟೋಬರ್ 18, 2009

ಅರುಣನ ಹೊಸ ಕವಿತೆ..

ಅರುಣ್ ಜೋಳದ ಕೂಡ್ಲಿಗಿ ಹೊಸ ತಲೆಮಾರಿನ ಉತ್ತಮ ಕವಿ. ಸರಳ ಪದ ಪ್ರಯೋಗದಲ್ಲಿ ಗಂಭೀರ ಒಳನೋಟಗಳನ್ನು ಹೊಮ್ಮಿಸುವ ಕಲೆ ಅವನಿಗೆ ಸಿದ್ಧಿಸಿದೆ. ಈ ವಾರದ ಲಂಕೇಶ್ (ಗೌರಿ) ಪತ್ರಿಕೆಯಲ್ಲಿ ಅವನ ಇತ್ತೀಚಿನ ಕವನ ಪ್ರಕಟವಾಗಿದೆ. ನೀವು ಒಮ್ಮೆ ಓದಿ..

ಕೈಗಳೇ ತ್ರಿಶೂಲವಾದ ದೇಶದಲ್ಲಿ
1
ನಾವು ಈ ದೇಶದ ನಿಜ ವಾರಸುದಾರರು
ಅಂದುಕೊಂಡವರಿಂದ ಆಕಾರ ತಿದ್ದಿಸಿಕೊಂಡು
ಚರಿತ್ರೆಯ ನಿಜ ಅಕ್ಷರಗಳ ಮುಊಲೆಗೊತ್ತಿ
ದೇಶಭಕ್ತಿಯ ಬೇರುಬಿಟ್ಟು ಹೆಮ್ಮರವಾಗಿಸಿ
ಓದುವವರ ತಡೆದು ತಾವೇ ಮಾತಾಡಿ ಇದು ಸತ್ಯ ಎಂದು ಕೂಗಿ
ಝಂಡಾ ಹಾರಿಸಿ ಜೈಕಾರ ಹಾಕುವುದ ಕೇಳಿಸಿಕೊಳ್ಳುತ್ತಲೇ
ಬೆಳಗಾಗುವುದರಲ್ಲಿ ಈ ದೇಶದ
ಎಷ್ಟೋ ಜನರ ಕೈಗಳು ತ್ರಿಶೂಲವಾಗುತ್ತವೆ!

2
ರಾತ್ರಿ ಗಂಡ ಮುಟ್ಟಿದಲ್ಲೆಲ್ಲಾ ಕೈ ಚುಚ್ಚಿ ರಕ್ತ ಒಸರಿ
ಆತಂಕದಿ ಇನ್ನೆಂದೂ ನಿನ್ನ ರಾತ್ರಿಗೆ
ಜತೆಯಾಗಲಾರೆ ಎಂದು ಹೆಂಡತಿ ಬಿಕ್ಕಳಿಸುತ್ತಾಳೆ!
ಮುದ್ದಿಸಿ ಕೈ ತುತ್ತನಿಟ್ಟ ಅಪ್ಪನ ಅದೇ ಕೈಗಳು ಇಂದು
ಮುಟ್ಟಲು ಬಂದರೆ
ಕೊಲ್ಲುವ ಭಯವಾಗಿ ಮಗು ಚಿಟಾರನೆ ಚೀರುತ್ತದೆ!

3
ಕೈ ತ್ರಿಶೂಲವಾಗದವರನ್ನೆಲ್ಲಾ ದೇಶದ್ರೋಹಿಗಳೆಂದು
ತೀರ್ಮಾನಿಸಲಾಗುತ್ತದೆ.
ಅಂತಹವರ ಇಲ್ಲವಾಗಿಸಬೇಕೆಂದು ಫರ್ಮಾನು ಹೊರಡುತ್ತದೆ.
ಈಗ ಕಮ್ಮಾರನ ಕುಲುಮೆಯೆದುರು ಅವರು ಸಾಲು ನಿಂತಿದ್ದಾರೆ.
ಕಮ್ಮಾರ ತಿದಿ ಒತ್ತುತ್ತಲೇ ಕೈ ಕೆಂಪತೆ ಕಾಯಿಸಿ
ಸುತ್ತಿಗೆಯಿಂದ ಕೊಡುವ ಒಂದೊಂದು ಏಟಿಗೂ ಅಮ್ಮಾ ಎಂದು
ಅರಚುತ್ತಾರೆ!
ತನ್ನ ಕೈ ತ್ರಿಶೂಲವಾಗದ ಕಮ್ಮಾರನಿಗೂ ಗೊತ್ತು
ತಾನು ಮೊನಚುಗೊಳಿಸಿದ ಕೈಗಳೇ ತನ್ನ ಹಿರಿದು ಕೊಲ್ಲಲಿವೆ
ಎಂದು.

4
ಯುದ್ಧ ಆರಂಭವಾಗುತ್ತದೆ
ಬೆರಳುಳ್ಳ ಕೈನವರ ನಾಶಕ್ಕೆ ಸೈನ್ಯ ಸಜ್ಜಾಗುತ್ತದೆ
ಸಿಕ್ಕವರು ಬಲಿಯಾಗುತ್ತಾರೆ. ಸ್ವತಃ ತಾಯಂದಿರೂ ಕೂಡ.
ಎಷ್ಟೋ ಜನ ಉಸಿರು ಬಿಗಿದು ಬಚ್ಚಿಟ್ಟುಕೊಳ್ಳುತ್ತಾರೆ.
ಹಸುಗೂಸುಗಳನ್ನು ತಾಯಂದಿರು ಮುಚ್ಚಿಟ್ಟುಕೊಳ್ಳುತ್ತಾರೆ.
ಇವರು ಜೈಕಾರ ಹಾಕುತ್ತಾರೆ.
ಗಂಟಲು ಒಣಗಿ ನೀರಿಗಾಗಿ ಹಾಹಾಕಾರ ಏಳುತ್ತದೆ.
ಗುಟುಕು ನೀರಿಗೆ ತುತ್ತು ಕೂಳಿಗೆ ಕೈಗಳಿಗಾಗಿ ತಡಕಾಡುತ್ತಾರೆ.
ಮತ್ತದೇ ಅಳಿದುಳಿದ ಜೀವಗಳ ಕೈಗಳೇ
ನೀರನ್ನಿತ್ತು ಕೂಳನ್ನಿತ್ತು ದೇಶಭಕ್ತರನ್ನೆಲ್ಲಾ
ನಮ್ಮವರೆಂದು ಕಾಪಿಡುತ್ತಾರೆ.
ಈಗ ಮತ್ತವರು ದೇವರಲ್ಲಿ ತಮ್ಮ ಮೊದಲ ಕೈ
ನೀಡೆಂದು ಮೊರೆಯಿಡುತ್ತಾರೆ.
ತಾವೇ ಫರ್ಮಾನು ಹೊರಡಿಸಿದ ದೇಶದ್ರೋಹಿಗಳ ಪಟ್ಟಿಯಲ್ಲಿ
ತಮ್ಮದೇ ಹೆಸರು ನೋಂದಾಯಿಸಲು ಸಾಲು ನಿಂತಿದ್ದಾರೆ!
- ಅರುಣ್ ಜೋಳದ ಕೂಡ್ಲಿಗಿ

ಕುಂಬಾರ ವೀರಭದ್ರಪ್ಪನೂ, ಆಸ್ಕರ್ ಅವಾರ್ಡೂ...

ಅಂದು ಚಿತ್ರದುರ್ಗದ ಸಾಹಿತ್ಯ ಸಮ್ಮೇಳನ ಮುಗಿಸಿ ರಾತ್ರಿ ಅರುಣ್ ಹೊಸಪೇಟೆ ಬಸ್ ಗೆ ಕಾಯುತ್ತಿದ್ದ. ಅದೇ ಹೊತ್ತಿಗೆ ಬಯಲು ಸೀಮೆಯ ಗಟ್ಟಿ ಕತೆಗಾರ ಕುಂವೀ ಎದುರಾರದರು. ಕೆಲ ಸ್ನೇಹಿತರೊಂದಿಗೆ ಅವರು ಬಸ್ ಸ್ಟಾಂಡ್ ಗೆ ಕಾರಲ್ಲಿ ಬಂದು ಇಳಿದರು. ಆ ಹೊತ್ತಿಗಾಗಲೇ ನಮ್ಮ ಗಟ್ಟಿ ಕತೆಗಾರ ಪರಮಾತ್ಮನನ್ನು ಆವಾಹಿಸಿದ್ದ ಕಾರಣ ಸ್ವಲ್ಪ ಟೊಳ್ಳಾದಂತೆ ಕಾಣುತ್ತಿದ್ದರು.
ತನ್ನ ಊರಿನ ಹಿರಿಯಣ್ಣ ಸಿಕ್ಕಾಗ ಮಾತನಾಡಿಸದೆ ಇರಲು ಅರುಣನಿಗೆ ಸಾಧ್ಯವಾಗಲಿಲ್ಲ. ರೆಡಿಯಾಗಿದ್ದ ಬಸ್ ನ್ನೂ ಬಿಟ್ಟು ಕತೆಗಾರನನ್ನು ಮಾತನಾಡಿಸಲು ಮುಂದಾದ.
ಅರುಣನನ್ನು ನೋಡಿದವರೇ ಕುಂವೀ ಉಲ್ಲಸಿತರಾದರು. ನಾಲ್ಕುದಿನಗಳ ಕಾಲ ದುರ್ಗದ ಸಾಹಿತ್ಯ ಉತ್ಸವದಲ್ಲಿ ಮುಳುಗಿ ಎದ್ದಿದ್ದ ಅವರು ಇನ್ನು ಕತೆ, ಕವಿತೆ, ವಿಮರ್ಶೆ ಗುಂಗಿನಿಂದ ಹೊರಬಂದಂತೆ ಕಾಣಲಿಲ್ಲ. ಅರುಣನನ್ನು ತಮ್ಮ ಸ್ನೇಹಿತರಿಗೆ ಪರಿಚಯಿಸುತ್ತ... "ಇವ ನಮ್ಮ ಊರಿನ ಯುವ ಕವಿ. ತುಂಬಾ ಚೆನ್ನಾಗಿ ಬರೀತಾನೆ.." ಎಂದರು. ಅಷ್ಟಕ್ಕೇ ಸುಮ್ನಾಗಿದ್ದರೆ, ಅರುಣನಿಗೆ ಆಘಾತ ಆಗ್ತಿರಲಿಲ್ಲ. ಕುಂವೀ ಮುಂದುವರೆದು "ನಮ್ಮ ಅರುಣ, ಅಡಿಗರಿಗಿಂತ ದೊಡ್ಡ ಕವಿ..." ಅಂದು ಬಿಟ್ಟರು. ತಕ್ಕಳಪ್ಪ, ಅರುಣ ಒಂದು ಕ್ಷಣ ದಿಕ್ಕೇ ತೋಚದಂತಾದ. ಕುಂವೀ ಸ್ನೇಹಿತರು ಅರುಣನನ್ನು ಗಮನಿಸುತ್ತಿದ್ದ ಪರಿ ಇದ್ದಕ್ಕಿದ್ದಂತೆ ಬದಲಾಯಿತು. ಎಲ್ಲರೂ ಎರಡೆರಡು ಬಾರಿ ಕೈ ಕುಲುಕಿ ಪರಿಚಯ ಮಾಡಿಕೊಂಡರು.
ಕುಂವೀ ಹೀಗೆ ಬಿರುದು ಕೊಟ್ಟಿರುವುದು ಅರುಣನಿಗೆ ಮಾತ್ರವಲ್ಲ. ಕೊಟ್ಟೂರಿನ ಹಲ ಕವಿ, ಕಲಾವಿದ ಮಿತ್ರರು ಇವರ ಹೊಗಳಿಕೆಗಳಿಂದ ಹಿಗ್ಗಿದ್ದಾರೆ. ನಾವು ನಮ್ಮಲ್ಲಿ ಬಳಗದ ಮಿತ್ರ ನಿರಂಜನ ಮುಊಲತಃ ಶಿಕ್ಷಕ. ಅವನ ಅದೃಷ್ಟವೋ, ದುರಾದೃಷ್ಟವೋ ಕುಂವೀ ಮಗ ಶಾಲೆಯಲ್ಲಿ ಇವನ ವಿದ್ಯಾರ್ಥಿ. ನಿರಂಜನ ಕೊಟ್ಟೂರು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ್ಲಿ ಉತ್ತಮ ಶಿಕ್ಷಕ ಎಂದೇ ಹೆಸರು ಗಳಿಸಿದ್ದಾನೆ. ಹೀಗೆ ಒಂದು ದಿನ, ಕುಂವೀ ತಮ್ಮ ಮಗನನ್ನು ನಿರಂಜನ್ ಸರ್ ಹೇಗೆ ಪಾಠ ಮಾಡ್ತಾರೋ ಅಂತ ಕೇಳಿದ್ದಾರೆ. ಮಗ, ಅವರು ತುಂಬಾ ಚೆನ್ನಾಗಿ ಪಾಠ ಮಾಡ್ತಾರೆ ಎಂದು ಬಿಟ್ಟಿದ್ದಾನೆ.
ಅಷ್ಟು ಸಾಕಿತ್ತು ಕುಂವೀ ಗೆ. ಮಾರನೇ ದಿನ ಕೊಟ್ಟೂರಿನ ಬಜಾರಿನಲ್ಲಿ ನಿರಂಜನ ಎದುರಾಗಿದ್ದಾನೆ. "ಓಯ್ ನೀನು ನಮ್ಮ ಕೊಟ್ಟೂರಿನ ಸರ್ವೆಪಲ್ಲಿ ರಾಧಾಕೃಷ್ಣ ಕಣಪ್ಪೋ.." ಎಂದು ಉದ್ಗರಿಸಿದ್ದಾರೆ. ನಿರಂಜನ ಅವರ ಮಾತನ್ನು ಅರಗಿಸಿಕೊಳ್ಳಲು ಸಿದ್ದು ದೇವರಮನಿ ಲುಬ್ರಿಕೆಂಟ್ಸ್ ಅಂಗಡಿಗೆ ಹೋಗಿ ಒಂದು ಕಪ್ ಚಹ ತರಿಸಿಕೊಂಡು ಕುಡಿಯಬೇಕಾಯ್ತು!
ಕುಂವೀ ಹೊಗಳಿಕೆಯ ಧಾಟಿಗೆ ಬೆಚ್ಚಿದವರು ಕಲಾವಿದ ಶ್ರೀಕಾಂತ್ (ಸೃಜನ್ ಎಂದೇ ಖ್ಯಾತಿ) ಕೂಡ. ಅವರು ತಮ್ಮ ಕೆಲ ಸ್ನೇಹಿತರ ಒಡಗೂಡಿ ಕುಂವೀ ಜೀವನ ಮತ್ತು ಸಾಧನೆ ಕುರಿತು ಒಂದು ಸಾಕ್ಷ್ಯಚಿತ್ರ ಚಿತ್ರೀಕರಿಸಿದರು. ಕುಂವೀ ಸಹಜವಾಗಿಯೇ ಖುಷಿಯಾದರು. ಸಾಕ್ಷ್ಯಚಿತ್ರ ದ ಫೈನಲ್ ಪ್ರಿಂಟ್ ತಯಾರಾಯಿತು. ಸ್ನೇಹಿತರೊಂದಿಗೆ ಕುಂವೀ ಕೂಡಾ ಅದನ್ನು ವೀಕ್ಷಿಸಿ "ಭಾರಿ ಚಲೋ ಮಾಡಿದಿರಪ್ಪಾ. ಈ ಸಾರ್ತಿ ರೆಹಮಾನ್ ಗೆ ಬಂದಂಗೆ ಮುಂದಿನ ಸರ್ತಿ ನಿಮಗೂ ಆಸ್ಕರ್ ಬರುತ್ತೆ ಗ್ಯಾರಂಟಿ.." ಅಂದರಂತೆ!