ಭಾನುವಾರ, ನವೆಂಬರ್ 15, 2009

ಹಸಿದ ಜೀವಗಳೊಂದಿಗೆ ಸರಕಾರದ ಆಟ

ಅದು ಸಿರುಗುಪ್ಪದಿಂದ ಹಚ್ಚೊಳ್ಳಿಗೆ ಹೋಗುವ ಹಾದಿ. ನೆರೆ ಇಳಿದ ಇನ್ನು ಕೆಲವೇ ಗಂಟೆಗಳಷ್ಟೆ. ಬಿಬಿಎಂಪಿ ಕಳುಹಿಸಿದ್ದ ಆಹಾರ ಪೊಟ್ಟಣಗಳನ್ನು ಹೊತ್ತ ಲಾರಿಯೊಂದು ಆಗ ತಾನೆ ಹಚ್ಚೊಳ್ಳಿಯಿಂದ ಸಿರುಗುಪ್ಪಕ್ಕೆ ಹಿಂತಿರುಗುತ್ತಿತ್ತು. ಪ್ರತಿ ಆಹಾರ ಪೊಟ್ಟಣದಲ್ಲಿ ಒಂದು ಬಿಸ್ಕತ್ ಪ್ಯಾಕ್, ಎರಡು ಬ್ರೆಡ್ ಪ್ಯಾಕ್ಸ್, 100 ಗ್ರಾಂ ಗ್ಲುಕೋಸ್ ಮತ್ತು 500 ಮಿಲೀ ನೀರು. ಇಂತಹ 50 ಅಥವಾ 100ರ ಪೊಟ್ಟಣಗಳನ್ನು ಒಂದು ಚೀಲದಲ್ಲಿ ತುಂಬಿ ಹಳ್ಳಿಹಳ್ಳಿಗೆ ರಸ್ತೆ ಮುಊಲಕ ತಲುಪಿಸುವ ಕೆಲಸಕ್ಕೆ ಬಳ್ಳಾರಿ ಜಿಲ್ಲಾ ಆಡಳಿತ ಮುಂದಾಗಿತ್ತು.
ಹಿಂದಿನ ದಿನವಷ್ಟೆ ಸರಕಾರ ಹೆಲಿಕಾಪ್ಟರ್ ಮುಊಲಕ ಈ ಪೊಟ್ಟಣಗಳನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡಿತ್ತು. ಆದರೆ ಎಲ್ಲಲ್ಲೂ ನೀರೇ ಇದ್ದ ಕಾರಣ ಆಕಾಶದಿಂದ ಹಾರಿ ಬಂದ ಪೊಟ್ಟಣಗಳು ಜನರಿಗೆ ತಲುಪಿದ್ದು ತೀರಾ ಕಡಿಮೆ. ಬಾಗೇವಾಡಿಯ ಗ್ರಾಮಸ್ತನ ಮಾತಿನಲ್ಲೇ ಹೇಳುವುದಾದರೆ.. "ಹೆಲಿಕಾಪ್ಟರ್ ನಿಂದ ಎಸೆದ ಎಷ್ಟೋ ಪೊಟ್ಟಣಗಳು ಅದು ನೀರಲ್ಲಿ ಬಿದ್ದವು. ಬ್ರೆಡ್, ಬಿಸ್ಕತ್, ಕೊಚ್ಚೆ ಮೇಲೆ ಬಿದ್ರೆ ಅದನ್ನು ಕತ್ತೆಯುಊ ಮುಟ್ಟಲ್ಲ".
ಆಕಾಶದಿಂದ ಎಸೆದ ಪೊಟ್ಟಣಗಳನ್ನು ಯಶಸ್ವಿಯಾಗಿ ಕ್ಯಾಚ್ ಹಿಡಿದವರಿಗೆ ಮಾತ್ರ ಆಹಾರ ಸಿಕ್ಕಿತ್ತು. ಇತರರದು ಸತತ 48 ಗಂಟೆಗಳ ಉಪವಾಸ. ಸುತ್ತಲೂ ನೀರಿದೆ, ಆದರೆ ನೀರಡಿಕೆ ನೀಗಿಸಲು ಒಂದು ಗುಟುಕೂ ನೀರಿಲ್ಲ. ವಿಶಿಷ್ಟ ಅಂದರೆ ಹಳ್ಳದ ಬುಡದಲ್ಲಿಯೇ ಇರುವ ಇಲ್ಲಿಯ ಗ್ರಾಮಗಳಲ್ಲಿ ಭತ್ತ ಬೆಳೆಗಾರರೇ ಹೆಚ್ಚು. ಭತ್ತ ಬೆಳೆಯುವವರೆಂದರೆ ತಕ್ಕಮಟ್ಟಿಗೆ ಸ್ಥಿತಿವಂತರೆ. ಬಾಗೇವಾಡಿ, ಕುಡುದರ ಹಾಳು, ಹಚ್ಚೊಳ್ಳಿ, ಶ್ರೀಧರಗಡ್ಡೆ ಹಳ್ಳಿಗಳಲ್ಲಿ ಮನೆಗೊಂದು ಕನಿಷ್ಟ ಒಂದು ಹಿರೋ ಹೊಂಡಾ ಇದ್ದೇ ಇತ್ತು. ಆದರೆ ಅವರನ್ನು ಪ್ರವಾಹ ಏಕ್ ದಂ ಉಪವಾಸಕ್ಕೆ ದೂಡಿತ್ತು.
ಕುಡುದರ ಹಾಳು ಎಂಬ ಹಳ್ಳಿಯ ಹೆಸರೇ ವಿಶಿಷ್ಟ. ಹೆಂಡ ಕುಡಿದರೆ ಹಾಳು ಎಂಬ ಸಂದೇಶ ಅದು ಸಾರುತ್ತಿದೆಯೋ, ಅಥವಾ ಅದು ಕಾಲಾಂತರದಲ್ಲಿ ಬೇರೆ ಬೇರೆ ರೂಪ ತಾಳಿ ಇಂದು ಈ ಹೆಸರು ಉಳಿದಿದೆಯೋ ಸ್ಪಷ್ಟವಿಲ್ಲ. ಆದರೆ ನೆರೆಯಂತೂ ಊರಿನ ಜನರ ಬಾಳನ್ನು ಕೆಲದಿನಗಳ ಮಟ್ಟಿಗೆ ಹಾಳು ಮಾಡಿದ್ದಂತೂ ಸುಳ್ಳಲ್ಲ. ಆ ಊರು ಅಕ್ಷರಶಃ ದ್ವೀಪವಾಗಿತ್ತು. ಸಿರುಗುಪ್ಪ ಕಡೆಗೆ ಸಾಗುವ ದಾರಿ ಮಧ್ಯೆ ಇದ್ದ ಸೇತುವೆ ಕುಸಿದ ಕಾರಣ ಆ ಊರಿಗೆ ಹಾಗೂ ಆ ಊರಿನ ಆಚೆಗಿರುವ ಹಚ್ಚೊಳ್ಳಿ, ಮಾಟೂರು ಹಳ್ಳಿಗಳಿಗೆ ಪರಿಹಾರ ಸಾಮಾಗ್ರಿ ತಲುಪಿಸುವುದು ಸರಕಾರಕ್ಕೆ ಕಷ್ಟವಾಗಿತ್ತು.
ಹಚ್ಚೊಳ್ಳಿಯಿಂದ ಹಿಂತಿರುಗುತ್ತಿದ್ದ ಆಹಾರ ಪೊಟ್ಟಣ ಹೊತ್ತ ಲಾರಿ ಹಿಂದೆ ಜನವೋ ಜನ. ಹೆಂಗಸರು, ಮಕ್ಕಳು ಲಾರಿಯ ಹಿಂದೆ ಕೈಚಾಚಿ ಓಡುತ್ತಿದ್ದಾರೆ. ಚಾಲಕ ಗಾಡಿಯನ್ನು ನಿಲ್ಲಿಸುವ ಮನಸ್ಸು ಮಾಡಲಿಲ್ಲ. ಹಿಂಬದಿಯಲ್ಲಿದ್ದ ವ್ಯಕ್ತಿ ಒಂದು ಚೀಲವನ್ನು ಎಸೆದ. ಅದು ನೆಲಕ್ಕೆ ಬಿತ್ತು. ಒಬ್ಬ ಮಧ್ಯ ವಯಸ್ಸಿನ ಹೆಂಗಸು ಅದನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದಳು. ಆ ಕ್ಷಣ ಆಕೆಯ ಮುಖದಲ್ಲಿ ಏನೋ ಸಾಧಿಸಿದ ಭಾವ.
ಲಾರಿಯವ ಮತ್ತೆ ಪೊಟ್ಟಣ ಎಸೆಯದೆ ಮುಂದೆ ಸಾಗಿದ. ಎಲ್ಲರೂ ಆಹಾರ ಪೊಟ್ಟಣಗಳಿಗಾಗಿ ಆ ಹೆಂಗಸಿಗೆ ಮುಗಿ ಬಿದ್ದರು. ಆಕೆ ಅನಾಮತ್ತಾಗಿ 25-30 ಪೊಟ್ಟಣಗಳಿರುವ ಚೀಲವನ್ನು ಹೆಗಲ ಮೇಲೆ ಹೊತ್ತು ತನ್ನ ಗುಸಿಸಲಿಗೆ ನಡೆದಳು. "ಯಾರಿಗೂ ಕೊಡಲ್ಲ. ಇದು ನನಗೆ ಸಿಕ್ಕಿರೋದು.. ನಿಮಗ್ಯಾಕೆ ಕೊಡಲಿ.." ಹೆಂಗಸಿನ ವರಸೆ.
ಸರಕಾರ ಒಂದು ದಿನ ಆಕಾಶದಿಂದ ಆಹಾರ ಪೊಟ್ಟಣ ಎಸೆದು ಕ್ಯಾಚ್ ಹಿಡೀರಿ ನೋಡೋಣ ಅನ್ನೋ ಚಾಲೆಂಜನ್ನು ಸಂತ್ರಸ್ತರಿಗೆ ಒಡ್ಡುತ್ತೆ. ಮಾರನೇ ದಿನ ತಾಕತ್ತಿದ್ದರೆ ನಮ್ಮ ಲಾರಿ ಹಿಂದೆ ಓಡಿ ಬಂದು ಕ್ಯಾಚ್ ಹಿಡೀರಿ ನೋಡೋಣ ಅನ್ನುತ್ತೆ. ಹಸಿದ ಹೊಟ್ಟೆಗಳೊಂದಿಗೆ ಆಟ ಆಡೋದು ಅಂದ್ರೆ ಇದೇ ತಾನೆ..?

ಕಾಮೆಂಟ್‌ಗಳಿಲ್ಲ: