ಮಂಗಳವಾರ, ಅಕ್ಟೋಬರ್ 20, 2009

ಕುಂವೀ ಕತೆ ಭಾಗ 2: ಸ್ವಲ್ಪ ಸತ್ಯ, ಅತ್ಯಲ್ಪ ಉಪ್ಪು!

ಕೊಟ್ಟೂರಿನಿಂದ ಮತ್ತಷ್ಟು ಮಸ್ತ್ ಕುಂವೀ ಕತೆಗಳು ರವಾನೆಯಾಗಿವೆ. ನಿಮಗೆ ಹೇಳಲೇಬೇಕು. ಕುಂವೀ 'ಅರಮನೆ' ಸೇರಿದ ಮೇಲೆ 'ಆರೋಹಣ' ಮುಗಿಸಿದ್ದಾರೆ. ಅರಮನೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ತಂದು ಕೊಟ್ಟಿತು. ಅದೇ ರೀತಿ ಆರೋಹಣ ಕುಂವೀಯನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿ.
ಮೊನ್ನೆ ಏನಾತಪ್ಪಾ ಅಂದ್ರೆ...
ಲುಬ್ರಿಕೆಂಟ್ಸ್ ಅಂಗಡಿ ಕವಿ ಸಿದ್ದು ದೇವರಮನಿ ಮತ್ತು ಈಗಷ್ಟೆ ಈ-ಟಿವಿ ಬಿಟ್ಟು ಕಾಲೇಜು ಚಾಕರಿಗೆ ಸೇರಿಕೊಂಡಿರೋ ಸತೀಶ್ ಪಾಟೀಲ ಇಬ್ಬರೂ ಕೂಡಿ 'ಲೇ ಭಾಳ ದಿನ ಆತಲ್ಲೋ ನಮ್ಮ ಕುಂವೀನ ಮಾತಾಡ್ಸಿ. ಹೋಗಿ ಮಾತಾಡ್ಸೋಣ' ಅಂತ ಅವರ ಮನಿ ಕಡಿ ಹೋಗಿದ್ರು. ಕತೆಗಾರರು ಆರಾಮಾಗಿ ಕಾಲು ಚಾಚಿಕೊಂಡು ಟಿವಿಯಲ್ಲಿ ಚಾನೆಲ್ ಮೇಲೆ ಚಾನೆಲ್ ಚೇಂಜ್ ಮಾಡ್ಕೊಂತಾ ಕೂತಿದ್ರು.
ಬರ್ರಿ, ಬರ್ರಿ... ಅಂತ ಮಾತಿಗೆ ಶುರುಹಚ್ಚಿ ಟಿವಿ ಆಫ್ ಮಾಡಿದರು. ಏನ್ರಪ್ಪಾ ಸಮಾಚಾರ ಎನ್ನುತ್ತಲೇ ಒಳಗೆ ಹೋಗಿ ಇತ್ತೀಚೆಗೆ ಬೆಂಗಳೂರಲ್ಲಿ ಬಿಡುಗಡೆಯಾದ ತಮ್ಮ ಕಾದಂಬರಿ 'ಆರೋಹಣ' ಎರಡು ಪ್ರತಿ ತಂದರು. "ಲೇ ಬಲಿ ಬಿದ್ವಿ" ಅಂತ ಮನಸ್ಸಿನಾಗೆ ಇಬ್ಬರೂ ಅಂದುಕೊಂಡು ಕಣ್ಣಲ್ಲೇ ಪರಸ್ಪರ ಸಂತಾಪ ಹಂಚಿಕೊಂಡರು...
"ಬೆಂಗಳೂರಿನಾಗೆ ಫಂಕ್ಷನ್ ಭಾರೀ ಜೋರ್ ಆತ್ರಪ್ಪಾ. ಏನ್ ಜನಾ ಅಂತೀ. ಮತ್ತೆ ಅಂತಿತಾ ಜನ ಅಲ್ಲ. ಎಲ್ಲಾ ಕ್ಲಾಸ್ ಆಡಿಯನ್ಸ್.."- ಹೀಗೆ ಮಾತಿಗೆ ಶುರು ಹಚ್ಚಿದರು. ಅವರ ನಿರೂಪಣೆ ಮುಗಿಯುವ ಹೊತ್ತಿಗೆ ಇಬ್ಬರ ಕೈಗೂ ಕಾದಂಬರಿಯ ಒಂದೊಂದು ಪ್ರತಿ!
"ಪುಸ್ತಕದ ರೇಟು 227 ರೂಪಾಯಿ. ನೀವು ನಮ್ಮೂರಿನವರು. ನಮ್ಮ ಊರಿನ ವಿಐಪಿಗಳು. ನಿಮಗೆ ಈ ಕಾಪಿಗಳು ಫ್ರೀ...(ಈ ಹೊತ್ತಿಗೆ ಸತೀಶ್ ಪಾಟೀಲನ ಮುಖ ಕೊಟ್ಟೂರಿನ ರಥಬೀದಿ ಉದ್ದಕ್ಕೆ ಅರಳಿತ್ತು) ... ಆದರೆ ನೀವೂ ಬರೆಯೋ ಹುಡುಗರು. ಫ್ರೀ ತಗೊಳಲ್ಲ ಅಂತ ಗೊತ್ತು. 27 ರೂಪಾಯಿ ಬಿಟ್ಟು, ಇನ್ನೂರು ರೂಪಾಯಿ ಕೊಡ್ರಿ ಸಾಕು", ಅಂದ್ರು ಕುಂವೀ. ರಥಬೀದಿಯಾಗಿದ್ದ ಸತೀಶ್ ಪಾಟೀಲನ ಮುಖ ಸಿದ್ದು ಅಂಗಡಿಯ ಯಾವುದೋ ಆಯಿಲ್ ಕುಡಿದಂಗೆ ಆಗಿತ್ತು! ವಿಧಿ ಇಲ್ಲ.
ಇಷ್ಟಕ್ಕೆ ನಿಲ್ಲೋಲ್ಲ. ಭಾರೀ ವಿಶೇಷ ಸಮಾಚಾರ ಅಂದ್ರೆ, ಕುಂವೀಗೆ ಮೊನ್ನೆ ಬೆಂಗಳೂರಿನಲ್ಲಿ ಯಾರೋ ಒಂದು ನಾಯಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನಾಯಿಯನ್ನು ಕರೆಯುತ್ತಾ "ಏ ಚಿನ್ನಿ ಇಲ್ಲಿ ಬಾ ಇಲ್ಲಿ. ಯಾರು ಬಂದಾರೆ ನೋಡು. ಇವರಿಬ್ಬರೂ ನಿನ್ನ ಮಾಮಾರು. ಹೈ ಮಾಡು" ಎಂದು ಉಡುಗೊರೆಯಾಗಿ ಬಂದ ನಾಯಿಗೆ ಇವರಿಬ್ಬರನ್ನೂ ಪರಿಚಯಿಸಿದರಂತೆ. ಈ ಹುಡುಗರ ಪೇಚಾಟ ಯಾವ ನಾಯಿಗೂ ಬೇಡ...

3 ಕಾಮೆಂಟ್‌ಗಳು:

desimaatu ಹೇಳಿದರು...

ಸತೀಶ್,
ನಿಮ್ಮ ಬ್ಲಾಗ್ ನೋಡಿ ಸಿಕ್ಕಾಪಟ್ಟೆ ಖುಷಿಯಾಗ್ತಾ ಇದೆ.
ನೀವೂ ಸಹ ಬ್ಲಾಗ್ ಲೋಕಕ್ಕೆ ಬಂದು ತಗುಲಿಹಾಕಿಕೊಳ್ಳಲಿ ಎಂದು ಭಾಳ ಆಸೆ ಇತ್ತು. ಸಂಬಂಜದ ಮೂಲಕ ಅದು ನಿಜ ಆಗಿದೆ.
ಇತ್ತೀಚಿಗೆ, ನನ್ನ ಬ್ಲಾಗ್ ಅಪ್‌ಡೇಟ್ ಮಾಡೋದಕ್ಕೇ ಹೋಗಿರಲಿಲ್ಲ, ನಾನಾ ಕಾರಣಗಳು.
ನಿಮ್ಮ ಬ್ಲಾಗ್ ನೋಡಿದ ಮೇಲೆ ಮತ್ತೆ ಬರೀಬೇಕು ಅನ್ನಿಸ್ತಾ ಇದೆ.
ಸ್ಫೂರ್ತಿ ನೀಡಿದ್ದಕ್ಕಾಗಿ ಥ್ಯಾಂಕ್ಸ್.
-ದಿನೇಶ್

Unknown ಹೇಳಿದರು...

ಇನ್ನು ಬರಲಿ,ಕುಂವೀ ಬಗೆಗಿನ ದಂತಕತೆಗಳು..ಸ್ವಾರಸ್ಯ ಸವಿಯುವ ಸಮಯ ನಮ್ಮದು

ಶ್ರೀನಿವಾಸಗೌಡ ಹೇಳಿದರು...

satish i stopped writing and reading almost for a month. i dont know why, but ur bolg dragged me again to blog loka. thanks a lot. keep writing.
i will alsi update shortly.